ಭಾರತದ ಇತಿಹಾಸದಲ್ಲಿ ಮರೆಯಲಾಗದ ರೋಚಕ ಕದನ ಕಾರ್ಗಿಲ್

  745
  0
  SHARE

  ಭಾರತದ ಇತಿಹಾಸದಲ್ಲಿ ಮರೆಯಲಾಗದ ರೋಚಕ ಕದನ ಕಾರ್ಗಿಲ್

  ಮತ್ತೆ-ಮತ್ತೆ ಕಾಡುತ್ತಿದೆ ಕಾರ್ಗಿಲ್‍ನ ಕರಾಳ ದೃಶ್ಯ


  ಭಾರತ ಮತ್ತು ಪಾಕಿಸ್ತಾನಗಳ ಕಳೆದ ಅರ್ಧ ಶತಮಾನದ ದ್ವೇಷದಲ್ಲಿ ಎಂದೂ ನಡೆಯದ ಕ್ರೌರ್ಯ, ರೋಚಕ ಕೃತ್ಯಗಳು ನಡೆದದ್ದು ಕಾರ್ಗಿಲ್‍ನಲ್ಲಿ ಅತೀ ಎತ್ತರದ ಪರ್ವತಚ್ಚಾದಿತ ಪ್ರದೇಶದಲ್ಲಿನ ಈ ಕಾದಾಟದಲ್ಲಿ 527 ಸೈನಿಕರು ಪ್ರಾಣತ್ಯಾಗ ಮಾಡಬೇಕಾಯಿತು. 1363 ಮಂದಿ ಗಾಯಗೊಂಡು ತಮ್ಮ ಕಣ್ಣು, ಕೈಕಾಲುಗಳನ್ನು ಶಾಶ್ವತವಾಗಿ ಕಳೆದುಕೊಂಡರು. 6 ಯೋಧರ ಪತ್ತೆ ಇಂದಿಗೂ ಸಿಕ್ಕಿಲ್ಲ 1999ರ ಮೇ ಎರಡರಂದು ಕಾರ್ಗಿಲ್ ಸೆಕ್ಟರ್‍ನಲ್ಲಿ ಶುರುವಾದ ದೇಶರಕ್ಷಣೆಯ ‘ಆಪರೇಷನ್ ವಿಜಯ’ ಜುಲೈ 26ರಂದು ತೋಯೋಲಿಂಗ್ ಪರ್ವತ ಶಿಖರದಿಂದ ಪಾಕಿಸ್ತಾನದ ಸೈನಿಕರನ್ನು ಸಂಪೂರ್ಣವಾಗಿ ತೆರವುಗೊಳಿಸಿ ತ್ರಿರಂಗ ಧ್ವಜವನ್ನಾರಿಸುವ ಮೂಲಕ ಯಶಸ್ವಿಯಾಗಿ ಮುಕ್ತಾಗೊಂಡಿತು.74 ದಿನಗಳ ಈ ಘನಘೋರ ಯುದ್ಧಕ್ಕೆ 1100 ಕೋಟಿ ವೆಚ್ಚ ಬರಿಸಬೇಕಾಯಿತು. ಕಾರ್ಗಿಲ್‍ನಂತಹ ಪ್ರದೇಶದಲ್ಲಿ ಹೋರಾಡಿದ 20000 ಕ್ಕೂ ಹೆಚ್ಚು ಯೋಧರ ಆ ಹುಮ್ಮಸ್ಸು, ದೇಶಪ್ರೇಮ, ಉತ್ಸಾಹ, ಛಲದ ಮುಂದೆ ಈ ಕೋಟಿಗಳ ವೆಚ್ಚ ಮೌಲ್ಯವಿಲ್ಲದ್ದು. ಕಾರ್ಗಿಲ್ ಸಮಶೀತೋಷ್ಣ ಹವಾಗುಣ ಹೊಂದಿದ್ದು ಚಳಿಗಾಲದಲ್ಲಿ ಮೈ ಕೊರೆಯುವಂತಾ ವಾತಾವರಣವಿತ್ತು. 160 ಕಿ.ಮೀ. ಉದ್ದಕ್ಕೂ ವಿಸ್ತರಿಸಿರುವ ಪರ್ವತ ಶ್ರೇಣಿಯಾಗಿದ್ದು, 16,00 ಅಡಿ ಎತ್ತರದಲ್ಲಿ ಸೇನೆ ಶಿಬಿರಗಳಿರುತ್ತವೆ. ಅತೀ ಎತ್ತರದ ಜಾಗದಲ್ಲಿ ಯುದ್ದ ಮಾಡಿದ ಸೈನಿಕರ ಸ್ಥಿತಿಯನ್ನು ಕಲ್ಪಿಸಿಕೊಂಡರೆ ಮೈ ನಡುಗುತ್ತದೆ. 1999 ಪೆಬ್ರವರಿ 21 ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲಾಹೋರ್‍ಗೆ ಬಸ್‍ನಲ್ಲಿ ತೆರಳಿ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರತ್ತ ಚಾಚಿದ ಸ್ನೇಹಸ್ತಕ್ಕೆ ಪಾಕ್ ಸ್ಪಂದಿಸಿದಾಗ ಉಭಯ ದೇಶಗಳ ನಡುವಿನ ಹಳೆ ದ್ವೇಷ ಅಳಿವುದೆಂದು ವಾಜಪೇಯಿ ನಂಬಿದ್ದರು. ಆದರೆ ಭಾಯಿ-ಭಾಯಿ ಎನ್ನುತ್ತಲೇ ಭಾರತದ ಬೆನ್ನಿಗೆ ಚೂರಿ ಹಾಕಲು ಪಾಕಿಸ್ತಾನಿಗಳು ಸಜ್ಜಾಗಿ ಭಾರತದೊಳಗೆ ನುಸುಳಿವಿಕೆಯಿಂದ 130 ಕಿ.ಮೀ.ದಿಂದ 200 ಕಿ.ಮೀ. ವರೆಗೆ ವಶಪಡಿಸಿ ಕೊಂಡಿರಬಹುದೆಂದು ಭಾವಿಸಲಾಗಿತ್ತು. ಆದರೆ ಪಾಕಿಗಳು ಭಾರತದ 500 ಚದರ ಮೈಲು (1300 ಕಿ.ಮೀ.) ಪ್ರದೇಶವನ್ನು ಆಕ್ರಮಿಸಲಾಗಿತ್ತು. ಅತಿಕ್ರಮಣಕಾರರು ಮೆಶೀನ್‍ಗನ್, ಗ್ರೆನೇಡ್ ಲಾಂಚರ್‍ಗಳು, ಮೋಟಾರ್‍ಗಳು, ಫಿರಂಗಿಗಳು, ವಿಮಾನ ನಿಗ್ರಹ ಬಂದೂಕುಗಳಿಂದ ಸಜ್ಜಾಗಿ ಮಾನವರಹಿತ ವಿಮಾನಗಳು ಮತ್ತು ಫೈರ್ ಫೈಂಡರ್‍ರೆಡಾರ್ ಮೂಲಕ ಭಾರತದ ಪಡೆಗಳ ಮೇಲೆ ಕಣ್ಗಾವಲು ನಡೆಸಿದರು.
  ಮೇ 14 ರಂದು ಮೊದಲ ಕಾರ್ಯಾಚರಣೆಗೆ ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತವರ ಪಡೆ ಕಕ್ಲರ್ ಪ್ರದೇಶಕ್ಕೆ ಧಾವಿಸುತ್ತೆ. ಎರಡು ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ಸಮರದ ಇತಿಹಾಸದಲ್ಲಿ ಕಂಡು ಕೇಳರಿಯದ ಕೃತ್ಯ ಈ ಕಾರ್ಯಾಚರಣೆಯಲ್ಲಿ ನಡೆಯಿತು.

  ಇದೊಂದು ಅಂತರಾಷ್ಟ್ರೀಯ ಯುದ್ದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾಲಿಯಾ ಮತ್ತವರ ಪಡೆಯ 6 ಮಂದಿ ಸೈನಿಕರನ್ನು ಸೆರೆ ಹಿಡಿದು ಕಣ್ಣುಗುಡ್ಡೆಗಳನ್ನು ಕಿತ್ತು, ಮೂಗು, ಕಿವಿ, ಕೈ-ಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿ, ಚಿಂದಿ ಚೂರಾದ ಭಾರತೀಯ ಸೈನಿಕರ ದೇಹಗಳನ್ನು ಹಸ್ತಾಂತರಿಸಿದಾಗ ಪಾಕಿಸ್ತಾನದ ಇಂತಹ ಪೈಶಾಚಿತಕತೆಗೆ ಇಡೀ ಜಗತ್ತೇ ದಿಗ್ಬ್ರಮೆಗೊಳ್ಳುತ್ತದೆ. 1971ರ ಯುದ್ಧದಲ್ಲಿ ಭಾರತ 63 ಸಾವಿರ ಪಾಕ್ ಸೈನಿಕರನ್ನು ಸೆರೆಹಿಡಿದಿತ್ತು. ನಂತರ ಅವರನ್ನೆಲ್ಲ ಸುರಕ್ಷಿತವಾಗಿ ತವರಿಗೆ ಕಳಿಸಲಾಗಿತ್ತು. ಭಾರತ ಅಂದು ತೋರಿದ ಔದಾರ್ಯಕ್ಕೆ ಪಾಕ್‍ನ ಪ್ರತಿಫಲ ಈ ಕ್ರೌರ್ಯ!
  ಜೂನ್ 2ರಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಯುದ್ದದ ವಾತಾವರಣವೇ ನಿರ್ಮಾಣಗೊಳ್ಳುತ್ತದೆ. ಇಲ್ಲಿಯವರೆಗಿನ ಕಾರ್ಯಾಚರಣೆಯಲ್ಲಿ ವಾಯುಪಡೆಯ 46 ಮಂದಿ ಹತರಾಗಿ 174 ಮಂದಿ ಗಾಯಗೊಂಡರು. ಜೂನ್ 12 ರಂದು ಭಾರತ ನಿಯಂತ್ರಣ ರೇಖೆಯ ವಿಚಾರದಲ್ಲಿ ಪಾಕಿಸ್ತಾನದೊಂದಿಗಿನ ರಾಜಿಯನ್ನು ನಿರಾಕರಿಸುತ್ತೆ. ಉಭಯ ರಾಷ್ಟ್ರಗಳ ನಡುವೆ ಹಿಂದೆ ಮೂರು ಬಾರಿ ಸಮರವೆ ನಡೆದಿದ್ದರೂ ಭಾರತ ಈ ಬಾರಿ ತಾಳಿರುವಷ್ಟು ಗಡಸು ನಿಲುವು ಹಿಂದೆಂದೂ ತಾಳಿರಲಿಲ್ಲ. ಸದ್ಯದ ಪರಿಸ್ಥಿತಿಗೆ ಈ ನಿಲುವು ಸರಿಯಾದದ್ದಾಗಿದೆ.


  ಭಾರತದ ಯುದ್ದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ದೇಶದ ಪ್ರಧಾನಮಂತ್ರಿ ಯುದ್ದಕ್ಷೇತ್ರಕ್ಕೆ ಪ್ರತ್ಯಕ್ಷ ಭೇಟಿ ಕೊಟ್ಟ ದಿನ ಜೂನ್ 13, ವಾಜಪೇಯಿ ಯುದ್ದ ಮುಂಚುಣಿ ಪ್ರದೆಶವಾದ ಬರೂ ಗ್ರಾಮಕ್ಕೆ ಭೇಟಿ ನೀಡಿ ಹಗಲಿರುಳು ಶತ್ರು ಪಡೆಯ ವಿರುದ್ದ ಹೋರಾಡುತ್ತಿದ್ದ ಸೈನಿಕರಿಗೆ ಸ್ಪೂರ್ತಿ ತುಂಬಿದರು ಈ ವಿಷಯ ತಿಳಿದ ಪಾಕಿಸ್ತಾನ, ಪ್ರಧಾನಿ ಹಿಂತಿರುಗಿ ಹೋಗದಂತೆ ಪಣ ತೊಟ್ಟು ದಾಳಿ ಆರಂಭಿಸಿತು. ಪ್ರಧಾನಿ ಇದ್ದ 2 ರಿಂದ 3 ಕಿ.ಮೀ. ಅಂತರದಲ್ಲೇ 5 ಶಲ್‍ಗಳ ಸ್ಪೋಟಿಸಿದರು. ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳಗಳಲ್ಲಿಯೂ ಶಲ್‍ಗಳು ಸ್ಪೋಟವಾಗಿದ್ದವು. ಆದರೂ ಧೃತಿಗೆಡದ ವಾಜಪೇಯಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. “ನಿಮ್ಮೆಲ್ಲರ ಬಗ್ಗೆ ನನಗೆ ಹೆಮ್ಮ ಇದೆ. ಇಡೀ ಭಾರತ ದೇಶದ ಜನತೆ ನಿಮ್ಮ ಬೆಂಬಲಕ್ಕಿದೆ”ಎಂದು ಸೈನಿಕರ ದೇಶಪ್ರೇಮವನ್ನು ಕೊಂಡಾಡಿದರು. ಈ ಭೇಟಿ ಸೈನಿಕರಲ್ಲಿ ಇಮ್ಮಡಿ ಉತ್ಸಾಹ ಮೂಡಿಸಿತು.
  17 ಸಹಸ್ರ ಅಡಿ ಎತ್ತರದ ತೋಲೋಲಿಂಗ್ ಪರ್ವತ, ದ್ರಾಸ್ ಪ್ರದೇಶದ ದುರ್ಗಮ ಕಣಿವೆ ಸೇರಿ ಜೂನ್ 20ಕ್ಕೆ ಇಡೀ ಕಣಿವೆಯನ್ನು ಸಂಪೂರ್ಣ ವಶ ಪಡಿಸಿಕೊಳ್ಳುತ್ತಾರೆ ನಮ್ಮ ಸೈನಿಕರು. ಅಷ್ಟರಲ್ಲಿ 144 ವೀರರು ಪ್ರಾಣತ್ಯಾಗ ಮಾಡಿದ್ದರು. ಜುಲೈ 3ರಂದು ನಡೆದ ಭೀಕರ ಕಾಳಗದಿಂದ ಸತತ 1ಗಂಟೆ ಹೋರಾಟದಲ್ಲಿ ಟೈಗರ್‍ಹಿಲ್ಸ್ ಪರ್ವತದಲ್ಲಿದ್ದ ಶತ್ರು ಪಡೆ ತತ್ತರಿಸಿ ಹೋಯಿತು. ಭಾರತೀಯ ಸೇನೆಗೆ ಇದೊಂದು ಬೃಹತ್ ವಿಜಯವಾಗಿತ್ತು. ಜುಲೈ 6ರಂದು ಜುಬಾರ್ ಹಿಲ್ಸ್ ಕೂಡ ಭಾರತದ ವಶವಾಯಿತು. ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರ, ಮದ್ದು, ಗುಂಡುಗಳನ್ನು ಬಿಟ್ಟು ಪಾಕ್ ಪಲಾಯನ ಮಾಡಿತು. ಬಟಾಲಿಕ್ ಮತ್ತು ದ್ರಾಸ್ ವಲಯದ ಮುಷ್ಕೋ ಕಣಿವೆ ಮತ್ತು ಕಕ್ಕರ್ ವಲಯಗಳು ಭಾರತದ ವಶವಾದವು. 74 ದಿನಗಳ ಕಾರ್ಗಿಲ್ ಕದನ ಮುಕ್ತಾಯಗೊಂಡಿತ್ತು. ಕೊನೆಯ ಪ್ರಯತ್ನವೆಂಬಂತೆ ಅತಿಕ್ರಮಣಕಾರರು ತಮ್ಮ ನೆಲೆಗಳಿಂದ ತೆರಳುವ ಮುನ್ನ ಶವದೊಳಗೆ ಭಾರಿ ನೆಲಬಾಂಬ್‍ಗಳನ್ನು ಹೂತ್ತಿಟ್ಟರು. ವಿಕೃತ ಬುದ್ದಿಯ ಈ ಪಿತೂರಿ ಭಾರತೀಯ ಸೇನೆಗೇನು ತಿಳಿಯದ ಸಂಗತಿ ಆಗಿರಲಿಲ್ಲ. 8ಸಾವಿರಕ್ಕೂ ನಿಗ್ರಹ ತೀವ್ರ ಶೋಧ ಕಾರ್ಯ ನಡೆಸಿ ನೆಲಬಾಂಬ್‍ಗಳನ್ನು ನಿಶ್ಕ್ರಿಯಗೊಳಿಸಲಾಯಿತು.
  ಜುಲೈ ಬಂದೊಡನೆ ಕಾರ್ಗಿಲ್ ನೆನಪಾಗುತ್ತದೆ. ಬಲೆ ಹಾಕಿ ಕಾದು ಕುಳಿತಿದ್ದ ಜವರಾಯನಿಗೂ ಜಗ್ಗದೆ ಮುನ್ನುಗಿದ ಕೆಚ್ಚೆದೆಯ ವೀರರು ಪ್ರಾಣದ ಹಂಗು ತೊರೆದು ಹೋರಾಡಿದ್ದು, ಪಾಕಿಸ್ತಾನಿಗಳ ವಂಚನೆಗೆ ಮಡಿದ ಯೋಧರ ಕರಾಳ ದೃಶ್ಯ ಕಣ್ಮುಂದೆ ಹಾದು ಹೋಗುತ್ತದೆ. ಕಾರ್ಗಿಲ್ ಹೋರಾಟದಲ್ಲಿ ತೋರಿದ ಶೌರ್ಯ ಪರಾಕ್ರಮಗಳಿಗಾಗಿ ಪರಮವೀರ ಚಕ್ರ ಪಡೆದ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್‍ಮೆನ್ ಸಂಜಯ್‍ಕುಮಾರ್ ರಂತಹ ಯೋಧರು ಪಾಕಿಸ್ತಾನ ಚೀನಾದಂತಹ ಕಪಟಿಗಳ ಗುಂಡಿಗೆ ಎದೆಯೊಡ್ಡಿ, ಎದೆಗುಂದದೆ ದೇಶ ರಕ್ಷಿಸಿದ ನಮ್ಮ ಯುದ್ದಕಲಿಗಳ ತ್ಯಾಗ ಹೇಗೆ ಮರೆಯಲು ಸಾದ್ಯ.

  ಚೈತ್ರಗೌಡ, ಹಾಸನ

  :- ಚೈತ್ರಗೌಡ, ಹಾಸನ
   ಎಂ.ಎ. ಪತ್ರಿಕೋದ್ಯಮ ವಿಭಾಗ
    ಮಾನಸಗಂಗೋತ್ರಿ, ಮೈಸೂರು
       8747070646

  NO COMMENTS

  LEAVE A REPLY