“ಬೆಳ್ಳಿಬೆಟ್ಟದ ಪುಷ್ಪಲೋಕ ಹೂವಿನ ಕಣಿವೆ” :- ಕಾವ್ಯಶ್ರೀ ಎಸ್.ಎನ್.

  529
  0
  SHARE

  ಬೆಳ್ಳಿಬೆಟ್ಟದ ಪುಷ್ಪಲೋಕ ಹೂವಿನ ಕಣಿವೆ

  ಇಲ್ಲಿಗೆ ಕಾಲಿಟ್ಟ ತಕ್ಷಣ ಕನಸಿನ ಲೋಕವೊಂದು ತೆರೆದುಕೊಂಡ ಅನುಭವವಾಗುತ್ತದೆ. ವೈವಿಧ್ಯಮಯ ಬಣ್ಣಗಳಲ್ಲಿ ಮೈಯೆಲ್ಲಾ ಆವರಿಸಿರುವ ಪುಳಕವನ್ನು ಮತ್ತೆ ಮತ್ತೆ ಪುಟಿಯುವಂತೆ ಮಾಡುವ ಅಸಂಖ್ಯಾತ ಹೂವುಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ. ವಿಸ್ತಾರವಾದ ಕಣಿವೆಯಲ್ಲಿ ಅತ್ಯಂತ ವರ್ಣಮಯ ಹೂವುಗಳು ಅರಳಿ ನಗುವ ಸ್ವರ್ಗೀಯ ದೃಶ್ಯವನ್ನು ಮತ್ತೆಲ್ಲೂ ನೀವು ಕಾಣಲು ಸಾಧ್ಯವಿಲ್ಲ. ಇದು ಭುವಿಯೋ ನಮ್ಮ ಕಲ್ಪನೆಯಲ್ಲಿ ಅರಳಿದ ಲೋಕವೋ ಎಂಬಷ್ಟು ವಿಸ್ಮಯ ಉಂಟುಮಾಡುತ್ತದೆ ಈ ಪುಷ್ಪ ಲೋಕ. ಅದನ್ನು ಹೂವಿನ ಕಣಿವೆ ಎನ್ನುತ್ತಾರೆ. ಪ್ರಶಾಂತ ವಾತಾವರಣದಲ್ಲಿ ಸ್ವಚ್ಛಂದವಾಗಿ ಅರಳಿನಿಂತ ಬಿಳಿ, ಹಳದಿ, ನಸುಗೆಂಪು, ಕೆಂಪು, ನೀಲಿಬಣ್ಣದ ಹೂವುಗಳನ್ನು ನೋಡುವುದೇ ಒಂದು ಹಿತಾನುಭವ. ಹಿಮ ಬೀಳುವುದು ಕಡಿಮೆಯಾಗಿ ಈ ಬೆಟ್ಟಕ್ಕೆ ಬರುವ ಅನೇಕ ಪ್ರವಾಸಿಗರು ಈ ಪುಷ್ಪ ಪ್ರಪಂಚದಲ್ಲಿ ಮೈಮರೆತೇ ಪ್ರವಾಸ ಮುಗಿಸುತ್ತಾರೆ. ಅಚ್ಚಹಸಿರಿನ ಹುಲ್ಲುಗಾವಲು, ಹಿಮಜರಿಗಳು, ಹೂವಿನ ಕಣಿವೆಯ ಸೌಂದರ್ಯವನ್ನು ನೂರ್ಮಡಿಗೊಳಿಸಿವೆ. ತನ್ನ ಅನುಪಮ ಸೌಂದರ್ಯದಿಂದ ವಿಶ್ವದ ಎಲ್ಲಾ ಪ್ರದೇಶಗಳ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

  ಎಲ್ಲಿದೆ ಈ ಹೂವಿನ ಕಣಿವೆ:
  ಕರ್ನಾಟಕದ ಪ್ರವಾಸಿ ತಾಣವಾದ ಹಿಮದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಈ ಹೂವುಗಳು ಕಾಣಸಿಗುತ್ತವೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಬೆಟ್ಟಕ್ಕೆ ತೆರಳುವ ಹಾದಿಯಲ್ಲಿ ಅಸಂಖ್ಯಾತ ಅತಿ ಅಪರೂಪದ ಪುಷ್ಪ ಪ್ರಭೇದಗಳ ಕಣಿವೆಯಲ್ಲಿವೆ. ಸಾಮಾನ್ಯವಾಗಿ ಫೆಬ್ರವರಿಯಿಂದ ಹೂವುಗಳು ಅರಳಲು ಪ್ರಾರಂಭಿಸುತ್ತವೆ. ಮಾರ್ಚ್-ಏಪ್ರಿಲ್ನಿಂದ ಸೆಪ್ಟೆಂಬರ್ ವರೆಗೆ ಎಲ್ಲಾ ಬಗೆಯ ಹೂವುಗಳು ಅರಳುವುದರೊಂದಿಗೆ ಪ್ರವಾಸಿಗರನ್ನು ಮುಗುಳ್ನಗೆಯ ಮಂದಹಾಸದೊಂದಿಗೆ ಸ್ವಾಗತಿಸುತ್ತಿವೆ.
  ಇನಿಯನನ್ನು ಕಂಡ ಪ್ರಿಯತಮೆ ನಾಚಿಕೆಯಿಂದ ಮುಖಮುಚ್ಚಿಕೊಂಡಂತಿರುವ ಬ್ರಹ್ಮಕಮಲ, ಸೂರ್ಯನತ್ತ ಮುಖಮಾಡಿ ನಗೆಚೆಲ್ಲುವ ಪುಷ್ಪರಾಶಿ, ಪುಟ್ಟಗಿಡಗಳ ಮೈತುಂಬಾ ಹರಡಿಕೊಂಡ ಸಣ್ಣನೆಯ ಹೂವುಗಳು ಹಲವಾರು ಬಗೆಯ ಪುಷ್ಪಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ಹೂವು ಗಳಲ್ಲಿ ಬ್ರಹ್ಮಕಮಲ ಸೇರಿದಂತೆ ಹಲವಾರು ಬಗೆಯ ಪುಷ್ಪಗಳು ದೇವರ ಪೂಜೆಗೆ ಅರ್ಪಣೆಯಾಗುತ್ತವೆ. ವರ್ಣವೈವಿಧ್ಯ ಹೂವುಗಳಿಂದ ತುಂಬಿರುವ ಹಾಗೂ ಪುಷ್ಪ ಅರಳುವ ವೈಭವ ನೋಡಲು ಏಪ್ರಿಲ್‌ ಮತ್ತು ಆಗಸ್ಟ್ ಮಧ್ಯಭಾಗ ಸಕಾಲ. ಹಾದಿಯುದ್ದಕ್ಕೂ ಅರಳಿನಿಂತ ಕುಸುಮಗಳು ಕಿರುನಗೆಯೊಂದಿಗೆ ನಮಗೆ ಸ್ವಾಗತ ಕೋರುತ್ತವೆ.

  ಕಾವ್ಯಶ್ರೀ ಎಸ್.ಎನ್.

  NO COMMENTS

  LEAVE A REPLY