ಜೀವಪರವಾದ ಚಿಂತನೆಗಳೊಂದಿಗೆ ಮುಕ್ತ ಮನಸ್ಸಿನ ಇಂದಿರಾ ಕೃಷ್ಣಪ್ಪ

  288
  0
  SHARE

  ಜೀವಪರವಾದ ಚಿಂತನೆಗಳೊಂದಿಗೆ ಮುಕ್ತ ಮನಸ್ಸಿನ ಇಂದಿರಾ ಕೃಷ್ಣಪ್ಪ
  “ಇದುವರೆಗಿನ ಸುದೀರ್ಘವಾದ ಜೀವನ ಅನೇಕ ಮಜಲುಗಳನ್ನು ಹಾದು, ಏರಿಳಿತಗಳನ್ನು ಕಂಡು ಸಾಗುತ್ತಾ ಬಂದಿದೆ. ಆದರೆ ಇಡೀ ಬದುಕಿನುದ್ದಕ್ಕೂ ನನ್ನ ಜೀವನ ಪ್ರೀತಿಗೆ ಪೂರಕವಾದ ಪ್ರೀತಿ-ವಿಶ್ವಾಸವನ್ನೇ ನಾನು ನನ್ನ ಒಡನಾಡಿಗಳಿಂದ ಪಡೆದುಕೊಂಡಿದ್ದೇನೆ. ಬಾಲ್ಯಜೀವನದಲ್ಲಿ ಹೋರಾಟದ ಹಿನ್ನೆಲೆಯೇನೂ ಹೊಂದಿರದಿದ್ದ ನನಗೆ, ಪ್ರೊ.ಬಿ.ಕೃಷ್ಣಪ್ಪನವರೊಂದಿಗಿನ ಒಡನಾಟ ಬದುಕಿನ ಮತ್ತೊಂದು ಮುಖವನ್ನು ಪರಿಚಯಿಸಿತು. ಸಮಾಜದ ಕೊಳೆಯನ್ನು ತೊಳೆಯುವ ಕೆಲಸದಲ್ಲಿ ತೊಡಗಿದ್ದ ಅವರೆಲ್ಲರ ಆದರ್ಶ ಬದುಕಿನ ಪರಿಚಯವಾಯಿತು.

  ಸಂಕುಚಿತ ಮನಸ್ಸಿನ ಜಾತಿವಾದಿಗಳಂತಹ, ದ್ವೇಶವನ್ನೇ ಬಿತ್ತುವ ಕೋಮುವಾದಿಗಳಂತಹ ಮನಸ್ಥಿತಿಯನ್ನೂ, ಆಲೋಚನೆಗಳನ್ನೂ ಹೊಂದಿರುವವರು ಬಹಳ ಕಡಿಮೆ ಜನ. ಬಹುಸಂಖ್ಯೆಯ ಜನರು ಆಳದಲ್ಲಿ ಮಾನವೀಯ ಗುಣಗಳನ್ನು ಹೊಂದಿರುವವರೇ ಆಗಿದ್ದಾರೆ. ಅವರೆಲ್ಲರ ಪ್ರೀತಿ ಪಡೆಯಬೇಕಾದರೆ ನಾವು ನಮ್ಮ ಅಹಂ ಅನ್ನು ಬಿಡಬೇಕು, ಮುಕ್ತವಾದ ಮನಸ್ಸನ್ನು ಹೊಂದಬೇಕು. ಆ ರೀತಿಯಲ್ಲಿ ಹಲವರ ಪ್ರೀತಿಯನ್ನು ಕಂಡುಂಡು ಬದುಕುವ ಅವಕಾಶ ದೊರೆತ ಸಾರ್ಥಕತೆಯ ಭಾವನೆ ನನಗಿದೆ ಎಂದ ಇಂದಿರಾ ಕೃಷ್ಣಪ್ಪನವರ ಕಣ್ಣುಗಳಲ್ಲಿ ಸಮಾಧಾನದ ಭಾವ ಹೊಳೆಯುತ್ತಿತ್ತು. ಅವರ ಬದುಕಿನ ಕಥೆಯನ್ನು ಕೇಳುತ್ತಿದ್ದ ನಮ್ಮನ್ನೂ ಆ ಭಾವ ಆವರಿಸಿದಂತೆನಿಸಿತು. ಅವರ ಮಾತುಗಳಿಗೆ ಸಾಕ್ಷಿಯೆಂಬಂತೆ ಅವರ ಇದುವರೆಗಿನ ಬದುಕೇ ನಮ್ಮೆದುರು ಅನಾವರಣಗೊಂಡಿತ್ತು.

  ಇಂದಿರಾ ಕೃಷ್ಣಪ್ಪನವರು ಹುಟ್ಟಿದ್ದು 1952ರ ಜುಲೈ 30ರಂದು. ತಂದೆ ರಾಮಚಂದ್ರ ಐತಾಳ, ತಾಯಿ ಅನಸೂಯಮ್ಮ. ಕನ್ನಡದ ಪ್ರಖ್ಯಾತ ಬರಹಗಾರ ಗೋ.ಕೃ.ಅಡಿಗರು ತಾಯಿಯ ಚಿಕ್ಕಪ್ಪ. ಇಂದಿರಾ ಅವರ ಮನೆಯಲ್ಲಿ ತಂದೆ ತಾಯಿ ಅಲ್ಲದೆ, ಅಕ್ಕ ಜಯಲಕ್ಷ್ಮಿ, ಅವಳಿ ತಂಗಿಯರು ಸಾವಿತ್ರಿ-ಗಾಯತ್ರಿ ಮತ್ತು ಒಬ್ಬ ತಮ್ಮ. ಹೋಟೆಲು ಮತ್ತು ಮನೆ ಎರಡೂ ಕಡೆ ತುಂಬಾ ಕೆಲಸ ಇರುತ್ತಿತ್ತು. ಬ್ರಾಹ್ಮಣ ಕುಟುಂಬವಾದರೂ, ಬಡತನ ಮತ್ತು ಪರಿಸ್ಥಿತಿಯ ಒತ್ತಡದ ಕಾರಣಕ್ಕೆ ಹೆಚ್ಚು ಮಡಿ-ಪೂಜೆ ಇತ್ಯಾದಿ ಅಂತ ಹಚ್ಚಿಕೊಂಡು ಕೂರೋಕೆ ಯಾರಿಗೂ ಆಗುತ್ತಿರಲಿಲ್ಲ. ಅದು ಒಂದು ರೀತಿಯಲ್ಲಿ ಬಾಲಕಿ ಇಂದಿರಾಗೆ ವರವೇ ಆಯಿತು. ದೇವರ ಮೇಲೆ ನಂಬಿಕೆಯ ಆಚೆ ಅತಿಯಾದ ಮೌಢ್ಯ ಬೆಳೆಯಲು ಅವಕಾಶವಾಗಲಿಲ್ಲ.

  ಜೊತೆಗೆ, ಮನೆಯಲ್ಲಿದ್ದ ದುಡಿಮೆಯ ವಾತಾವರಣ, ಅದರಲ್ಲಿ ಪುರುಷರಿಗೂ ಮಹಿಳೆಯರಿಗೂ ಇರುತ್ತಿದ್ದ ವ್ಯತ್ಯಾಸ, ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಹಲವು ಬಾಲಕಾರ್ಮಿಕರ ಸ್ಥಿತಿ, ಹೋಟೆಲ್ ಕೆಲಸಕ್ಕೆ ನೆರವಾಗಲು ಬರುತ್ತಿದ್ದ ತಮಿಳು ಅಜ್ಜಿ ಪಾಟಿ ಹೇಳುತ್ತಿದ್ದ ಅವರ ಕಡುಕಷ್ಟದ ಕಥೆಗಳು….ಇವೆಲ್ಲ ಆಲೋಚಿಸುವಂತೆ ಮಾಡುತ್ತಿದ್ದವು.
  ಕೆಲವು ಆಕಸ್ಮಿಕ ಘಟನೆಗಳೂ ಕೂಡಾ ಅವರ ವ್ಯಕ್ತಿತ್ವವನ್ನು ರೂಪಿಸಿದವು. ಮನೆಯ ಹತ್ತಿರ ಶಾಲೆಗೆಂದು ತೋಡಿದ್ದ ಆಳದ ತೊಟ್ಟಿಯ ಬಳಿ ಆಡುತ್ತಿದ್ದಾಗ ಇಂದಿರಾ ಅವರ ತಮ್ಮ ಆ ತೊಟ್ಟಿಯಲ್ಲಿ ಬಿದ್ದು ತೀರಿಕೊಂಡ ಸಂದರ್ಭದಲ್ಲಿ ತಾಯಿ ಅಳುತ್ತಾ ಇದ್ದ ಒಬ್ಬ ಮಗ ಸಾಯುವ ಬದಲು ಇಷ್ಟು ಜನ ಹೆಣ್ಣುಗಳಿದ್ದೀರಲ್ಲ, ನೀವ್ಯಾರಾದರೂ ಒಬ್ಬರು ಸಾಯಬಾರದಿತ್ತಾ, ನನ್ನ ಮಗ ಉಳಿಯಬಹುದಿತ್ತಲ್ಲಾ…. ಎಂದು ರೋದಿಸುತ್ತಿದ್ದರು.

  ಆ ದುಃಖದಲ್ಲಿಯೂ ಬಾಲಕಿ ಇಂದಿರಾಗೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ತಮ್ಮನ ಬದಲು ನಾವ್ಯಾರಾದರೂ ಸತ್ತಿದ್ದರೆ ಹೇಗೆ ಒಳ್ಳೆಯದು, ಆಗ ತಾಯಿಗೆ ದುಃಖವಾಗುತ್ತಿರಲಿಲ್ಲವೇ, ಅವನೇ ಯಾಕೆ ಬದುಕಬೇಕು, ನಾವು ಯಾಕೆ ಸಾಯಬೇಕು ಇತ್ಯಾದಿ ನೂರಾರು ಪ್ರಶ್ನೆಗಳೆದ್ದವು. ಈಗಲೂ ಆ ಘಟನೆ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
  ಪಿಯುಸಿ ನಂತರ ಪದವಿ ವ್ಯಾಸಂಗಕ್ಕಾಗಿ ಭದ್ರ ಕಾಲೇಜು ಸೇರಿದ ಇಂದಿರಾ ಅವರಿಗೆ ಶುಗರ್ ಟೌನ್ ಗ್ರಂಥಾಲಯಕ್ಕೆ ಹೋಗುವ ಅವಕಾಶವೂ ಸಿಕ್ಕಿತು. ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದ ಫ್ರೊ. ಕೃಷ್ಣಪ್ಪರವರ ವಿಚಾರಗಳು ಮತ್ತು ಗ್ರಂಥಾಲಯದಲ್ಲಿದ್ದ ಗಾಂಧಿ, ಬಸವಣ್ಣ ಮುಂತಾದ ಸಮಾಜ ಸುಧಾರಕರ ವಿಚಾರಗಳನ್ನೊಳಗೊಂಡಿದ್ದ ಪುಸ್ತಕಗಳು ಇವರನ್ನು ಸೆಳೆದಿದ್ದವು.

  ಇಷ್ಟರಲ್ಲಾಗಲೇ ವಿಭಿನ್ನವಾಗಿ ಚಿಂತಿಸುತ್ತಿದ್ದ ಇವರಿಗೆ ಅಲ್ಲೆಲ್ಲೂ ಅಂಬೇಡ್ಕರ್‍ರವರ ಹೆಸರಿನ ಪ್ರಸ್ತಾಪವಾಗಲೀ, ಅವರ ವಿಚಾರವಾಗಲೀ, ಅವರ ಬರಹಗಳುಳ್ಳ ಪುಸ್ತಕಗಳಾಗಲೀ ಕಾಣಿಸದೇ ಹೋದದ್ದು ಇದರ ಹಿಂದಿರಬಹುದಾದ ಕಾರಣಗಳ ಬಗ್ಗೆ ಆಲೋಚನೆ ಹುಟ್ಟಿಸಿತು.ಆ ವೇಳೆಗಾಗಲೇ ಪುಟ್ಟ ಬಂಡಾಯಗಾರ್ತಿಯೇ ಆಗಿದ್ದ ಇಂದಿರಾರವರು, ತಂದೆ ತಾಯಿ ಹೇಳುವ ಮುಟ್ಟಿನ ನಿಯಮಗಳು ಸತ್ಯವೇ ಎಂದು ಪರೀಕ್ಷಿಸಲು ಒಮ್ಮೆ ಮುಟ್ಟಾದಾಗ ರಹಸ್ಯವಾಗಿ ನಾಗಬನಕ್ಕೆ ಹೋಗಿ, ಯಾವ ನಾಗರಹಾವೂ ಬಂದು ಕಚ್ಚುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಇವರು ಅದೇ ರೀತಿ ಕೋಳೂರ ಕೊಡಗೂಸು ಕಥೆ, ದೇವಮಹಿಮೆಯ ಕಥೆ ಕೇಳಿ ಹಿತ್ತಿಲಲ್ಲಿ ರಹಸ್ಯವಾಗಿ ಒಂದು ಕಲ್ಲಿನ ದೇವರನ್ನು ಸ್ಥಾಪಿಸಿ, ಒಂದು ವರ್ಷ ಪೂರ್ತಿ ಪೂಜಿಸಿದ್ದರೂ ಯಾವ ದೇವರೂ ಪ್ರತ್ಯಕ್ಷನಾಗದಿರಲು ಮೌಢ್ಯದಿಂದ ಹೊರಬಂದರು.

  ಕಾಲೇಜಿನಲ್ಲಿ ಮಾತ್ರವಲ್ಲದೆ ಹೊರಗೂ ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇಂದಿರಾ ವಿಕ್ರಮ, ನವಯುಗ ಮೊದಲಾದ ಪತ್ರಿಕೆಗಳಿಗೆ ನಿಯಮಿತವಾಗಿ ಬರಹಗಳನ್ನು ಬರೆಯುತ್ತಿದ್ದರು. ಕೃಷ್ಣಪ್ಪನವರು ನಡೆಸುತ್ತಿದ್ದ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಭಾಗವಹಿಸಸುತ್ತಿದ್ದ, ತಮ್ಮ ಆಲೋಚನೆಗಳನ್ನು ಅವರೊಂದಿಗೆ ಚರಚಿಸುತ್ತಿದ್ದ ಇವರಿಗೆ ಕೃಷ್ಣಪ್ಪರನ್ನು ತಾವು ಪ್ರೀತಿಸುತ್ತಿರುವುದಾಗಿ ಅರಿವಾಯಿತು. ಜಾತಿಯ ಪ್ರತಿಷ್ಟೆ ಹೊಂದಿದ್ದ ಅವರ ಕುಂಟುಂಬದ ವಿರೋಧವನ್ನು ಎದುರಿಸಿ ಕೃಷ್ಣಪ್ಪರ ಕೈ ಹಿಡಿದರು.

  ಅಂತರ್ಜಾತಿ ಮದುವೆಯಾಗಿ ಯಶಸ್ವಿ ಜೀವನ ನಡೆಸುತ್ತಿದ್ದ ಇವರು ಅನೇಕ ಯುವ ಜೋಡಿಗಳಿಗೆ ಪ್ರೇರಣೆಯಾಗಿದ್ದರು, ಕೋಮುವಾದಿ ಶಕ್ತಿಗಳನ್ನು ವಿರೋಧಿಸುತ್ತಿದ್ದ ಸಮಾಜವಾದಿ ಯುವಜನಾ ಸಭಾದಿಂದ ಹಲವಾರು ಅಂತರ್ಜಾತಿ ಸರಳ ವಿವಾಹಗಳನ್ನು ನಡೆಸಿದರು. ಇದೇ ಸಮಯದಲ್ಲಿ ಯುವಜನಾ ಸಭಾದೊಳಗೂ ವೈಚಾರಿಕ ವಾಗ್ವಾದಗಳು ಆರಂಭವಾದವು, ಶೂದ್ರ ಸ್ವಾಭಿಮಾನದ ಹಿನ್ನೆಲೆಯಲ್ಲಿ ಬ್ರಾಹ್ಮಣ ಪುರೋಹಿತಶಾಹಿಯನ್ನು ಸಭಾದ ತಾತ್ವಿಕತೆ ವಿರೊಧಿಸುತ್ತಿದ್ದರೂ, ಅಸ್ಪಷ್ಯರನ್ನು ದೊಡ್ಡಮಟ್ಟದಲ್ಲಿ ಶೋಷಿಸುತ್ತಿದ್ದ ಶೂದ್ರ ಜಾತಿಗಳ ಜಾತೀಯತೆಯನ್ನು ಪ್ರಶ್ನಿಸುತ್ತಿರಲಿಲ್ಲ ಆದ್ದರಿಂದ ಪ್ರತ್ಯೇಕ ದಲಿತ ಸಂಘಟನೆ ಕಟ್ಟಬೇಕೆಂಬ ಆಲೋಚನೆ ಈ ದಂಪತಿಗಳಲ್ಲಿ ಮೊಳಕೆಯೊಡೆಯಿತು.

  1976ರಲ್ಲಿ ಭದ್ರಾವತಿಯಲ್ಲಿ ದಲಿತ ಲೇಖಕ ಕಲಾವಿದರ ಮೊದಲ ಸಭೆ ನಡೆಸಿದ ಇವರು. ದಲಿತರಿಗೊಂದು ಕರೆ ಎಂಬ ಕರಪತ್ರದಲ್ಲಿ ತಮ್ಮ ಸಮಗ್ರ ಚಿಂತನೆಯ ಸಾರವನ್ನು ಮುಂದಿಟ್ಟರು. ದಲಿತ ಸಂಘರ್ಷ ಸಮಿತಿಯ ಜೊತೆ 1986ರಲ್ಲಿ ನಡೆಸಿದ ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋಧಿ ಹೋರಾಟವೂ ಒಂದು. ಇಂದಿರಾ ಅವರ ಬದುಕಿನಲ್ಲಿ ಅದೊಂದು ಮರೆಯಲಾಗದ ಅನುಭವ.

  ದಸಸಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ವಿರುದ್ಧ ಹೋರಾಟ, ದಲಿತರ ಹಕ್ಕುಗಳ ಹೋರಾಟ ಮಾತ್ರವಲ್ಲದೆ, ಹಲವು ದಮನಿತ ಶೋಷಿತ ಜನರ ಸಮಸ್ಯೆಗಳ ವಿರುದ್ದದ ಹೋರಾಟಗಳಲ್ಲಿ ಇಂದಿರಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದಸಂಸದ ಚಟುವಟಿಕೆಗಳು ಉತ್ತುಂಗದಲ್ಲಿದ್ದ ಹೊತ್ತಿನಲ್ಲೇ ರೈತ ಸಂಘ ಹುಟ್ಟಿತು. ರೈತಸಂಘ ಮತ್ತು ದಲಿತ ಸಂಘಗಳೆರಡರ ಕೆಲಸಗಳನ್ನೂ ಹತ್ತಿರದಿಂದ ನೋಡುತ್ತಾ ಬಂದ ಇಂದಿರಾ ಅವರಿಗೆ ದಸಂಸ, ರೈತಸಂಘ ಎರಡರ ಸಂಸ್ಥಪಕರೂ ಸಮಾಜವಾದದ ಮೂಸೆಯಿಂದಲೇ ಬಂದವರು. ದಸಂಸ ಕೇವಲ ದಲಿತ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲಾ ಬಡವರ ವಿಚಾರಕ್ಕೂ ಪ್ರತಿಕ್ರಿಯಿಸುವಾಗ, ರೈತ ಸಂಘದ ನಾಯಕರು ಮಾತ್ರ ಯಾಕೆ ಜಾತಿ ಪ್ರಶ್ನೆಯನ್ನು ಎತ್ತಿಕೊಳ್ಳಲಿಲ್ಲ ಎಂಬ ಪ್ರಶ್ನೆ ಕಾಡತೊಡಗಿತು, ಅದು ಹಾಗೆಯೇ ಉಳಿಯಿತು.

  ದಲಿತ ಬಂಡಾಯ ಸಾಹಿತ್ಯಗಳು ಆರಂಭವಾಗುತ್ತಿದ್ದ ಸಮಯದಲ್ಲಿ ಸಮುದಾಯವು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನೇ ಕೇಂದ್ರವಾಗಿಟ್ಟುಕೊಂಡು 1985ರಲ್ಲಿ ದಲಿತ ದೌರ್ಜನ್ಯ ವಿರೋಧಿ ಜಾಥಾ ಹಾಗೂ ಗೋಕಾಕ್ ಚಳುವಳಿಯಲ್ಲಿ ಕೃಷ್ಣಪ್ಪರವರೊಂದಿಗೆ ಪಾಲ್ಗೊಂಡಿದ್ದ ಇವರಿಗೆ ಸಾಮೂಹಿಕ ಹಿತ ಮತ್ತು ಪ್ರಜಾತಂತ್ರಕ್ಕೆ ಹೆಚ್ಚು ಬೆಲೆ ಕೊಡುವುದು ಒಂದು ಪ್ರಬುದ್ಧ ಚಳವಳಿ ನಿರ್ಮಾಣಕ್ಕೆ ಎಷ್ಟು ಅಗತ್ಯ ಎಂಬುದು ಮನಸ್ಸಿನಾಳಕ್ಕೆ ಇಳಿಯುತ್ತಾ ಹೋಯಿತು.
  ಹೋರಾಟಗಳ ಜೊತೆಗೆ ಬರಹಗಾರ್ತಿಯಾಗಿಯೂ ಇಂದಿರಾರವರು ಮಹಿಳಾ ಹೋರಾಟದ ಇತಿಹಾಸವನ್ನು ಆಳವಾದ ಅಧ್ಯಯನ, ನೊಂದವರ ಪರವಾದ ದನಿ ಹಾಗೂ ಇತಿಹಾಸವನ್ನು ನ್ಯಾಯೋಚಿತವಾಗಿ ನಿರೂಪಿಸಬೇಕೆಂಬ ಹಂಬಲ, ದಲಿತ ಮತ್ತು ಮಹಿಳಾ ಕಾಳಜಿಯನ್ನೊಳಗೊಂಡ ವಿಮೋಚನೆಯ ಹಾದಿಯಲ್ಲಿ, ಅವಳ ಹೆಜ್ಜೆಯ ಹಾದಿ ಹಿಡಿದು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

  ಕೃಷ್ಣಪ್ಪನೆಂಬ ದೈತ್ಯ ಪ್ರತಿಭೆಯ ಜೊತೆಗಿದ್ದು ಎಲ್ಲದರಲ್ಲೂ ಸಹಭಾಗಿಯಾಗಿರುತ್ತಲೇ, ಮಾಮೂಲಿ ಗೃಹಿಣಿಯಂತೆ ಬದುಕದೆ ಮನೆಯ ಒಳಗೂ ಹೊರಗೂ ಸಾಮಾಜಿಕ ಕಾರ್ಯಕರ್ತೆಯಗಿ ದುಡಿಯುತ್ತಿರುವ ಇವರು, ಮನೆಯ ಜವಾಬ್ದಾರಿಗಳನ್ನೂ ಕೂಡಾ, ಅವು ನನ್ನ ಸಾಮಾಜಿಕ ಕೊಡುಗೆ ಎಂಬ ನೆಲೆಯಲ್ಲಿಯೇ ನೋಡಿ ಸಮರ್ಥವಾಗಿ ನಿಭಾಯಿಸಿಕೊಂಡು ವೃತ್ತಿ, ಕುಟುಂಬ, ಚಳವಳಿ ಎಲ್ಲವನ್ನೂ ಏಕಕಾಲದಲ್ಲಿ ಸರಿದೂಗಿಸುವ ಕಲೆಯನ್ನೂ ಕಲಿತಿದ್ದಾರೆ.
  ಇಂದಿರಾ ಕೃಷ್ಣಪ್ಪನವರಿಗೆ ಅಚಲವಾದ ನಂಬಿಕೆ ಇರುವುದು ಜನರ ದನಿಯ ಮೇಲೆ. ಜನರ ನೋವು ನಲಿವುಗಳಿಗೆ ದನಿಯಾಗಬಲ್ಲ ಚಳವಳಿಗಳಿಗೆ ಯಾವಾಗಲೂ ಸ್ಥಾನ ಇದ್ದೇ ಇರುತ್ತದೆ; ಇಂದು ಜಾಗತೀಕರಣದಿಂದ ದಲಿತರು, ಮಹಿಳೆಯರು, ಅತಿ ಕೆಳಹಂತದ ಕಾರ್ಮಿಕರು ಹೆಚ್ಚು ದಾಳಿಗೊಳಗಾಗುತ್ತಿದ್ದಾರೆ.

  ಇವರೆಲ್ಲರೂ ಒಗ್ಗೂಡಿ ಹೋರಾಟವಾಗಿ ಹೊರಹೊಮ್ಮುವ ಕಾಲ ಬಂದೇ ಬರುತ್ತದೆ; ಅಮೇರಿಕಾದಂಥ ದೇಶದಲ್ಲಿಯೇ ಆಕ್ಯುಪೈ ವಾಲ್‍ಸ್ಟ್ರೀಟ್ ನಂಥ ಚಳವಳಿ ಸಿಡಡಿಯಬಹುದಾದರೆ, ಭಾರತದಲ್ಲಿ ಏಕೆ ಸಾಧ್ಯವಿಲ್ಲ? ಅದಕ್ಕಾಗಿ ಚಳವಳಿಗಳ ಪ್ರಯತ್ನ ಬೇಕಷ್ಟೇ, ಅಂತಹ ಜನರ ದನಿ ಹೊರಹೊಮ್ಮುವ ಚಳವಳಿಗಳೊಂದಿಗೆ ಯಾವಾಗಲೂ ನಾನಿದ್ದೇನೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡುವ ಇಂದಿರಾರವರು ಇಂದಿನ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ!

  -ಸೊಮಶೇಖರ್ ಚಲ್ಯ
  ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸ ಗಂಗೋತ್ರಿ. ಮೈಸೂರು

  NO COMMENTS

  LEAVE A REPLY