ವೃದ್ಧಿ ಪ್ರಾಪ್ತಿಯ ಅಕ್ಷಯ ತದಿಗೆ

  238
  0
  SHARE

  ವೃದ್ಧಿ ಪ್ರಾಪ್ತಿಯ ಅಕ್ಷಯ ತದಿಗೆ:

  ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಶುಕ್ಲ ಪಕ್ಷದ ತೃತೀಯ ದಿನದಂದು ಆಚರಿಸಲಾಗುತ್ತದೆ. ಈ ಅಪೂರ್ವ ದಿನವು ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ವರ್ಷದ ಮೂರುವರೆ ಶುಭಯೋಗಗಳಲ್ಲಿ ಒಂದಾಗಿದೆ. ಅಲ್ಲದೆ, ಶುಭಕಾರ್ಯಗಳ ಆರಂಭಕ್ಕೆ ಹಾಗೂ ಸಾಧಕರ ಸಾಧನೆಗೆ ಸ್ಪೂರ್ತಿಯಾಗುವ ಅತ್ಯಂತ ಪ್ರಶಸ್ತವಾದ ದಿನ. ಕ್ಷಯವಿಲ್ಲದಿರುವ ಮತ್ತು ವೃದ್ಧಿಸುವ ಗುಣವಿರುವ ಸಮೃದ್ಧಿಯ ಹಬ್ಬವೇ ಈ ‘ಅಕ್ಷಯ ತೃತೀಯ’.

  ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುವ ಧನ-ಕನಕ ಗಳು, ಬೆಲೆಬಾಳುವ ವಸ್ತುಗಳನ್ನು ಈ ದಿನದಂದು ಖರೀದಿಸಿ, ವೃದ್ಧಿಸಿಕೊಳ್ಳುವ ಸದಾಶಯದೊಂದಿಗೆ ಅದೃಷ್ಟದ ಪರಿಯನ್ನು ಹೊಂದಬಹುದೆಂಬ ಅಚಾನಕ ನಂಬಿಕೆ ಜನರಲ್ಲಿದೆ. ತ್ರೇತಾಯುಗದ ಶುಭಾರಂಭದ ದಿನ ಎಂದು ಆಚರಿಸುವ ಈ ಅಕ್ಷಯ ತೃತೀಯ ದಿನದಂದು ವಿವಾಹ, ಅಕ್ಷರಾಭ್ಯಾಸದಂಥ ಮಂಗಳಕಾರ್ಯಗಳನ್ನು ಆರಂಭಿಸಿದರೆ ಯಶಸ್ಸು ಸಿಗುತ್ತದೆಂಬ ಅಚಲ ವಿಶ್ವಾಸ ಜನರಲ್ಲಿ ಪುರಾತನ ಕಾಲದಿಂದಲೂ ಇದೆ.

  ಅಷ್ಟ ಐಶ್ವರ್ಯಗಳನ್ನು ಮೀರಿದ ಸ್ನೇಹ ಕೃಷ್ಣ-ಸುಧಾಮರದ್ದು ಎಂಬ ಕತೆ ನಮಗೆ ತಿಳಿದಿದೆ. ಬಡತನ ನಿವಾರಿಸಿಕೊಳ್ಳುವ ಇಚ್ಚೆಯೊಂದಿಗೆ ದ್ವಾರಕೆಗೆ ಬರುವ ಸುದಾಮ, ಕೃಷ್ಣನ ಬಳಿ ತನ್ನ ಇಚ್ಛೆಯನ್ನು ನಿವೇದಿಸಿಕೊಳ್ಳುವಲ್ಲಿ ಹಿಂಜರಿಯುತ್ತಾನೆ. ಆಗ ಶ್ರೀ ಕೃಷ್ಣನು ಸುದಾಮನ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ, ಸುದಾಮನನ್ನು ಕುಚೇಲನಿಂದ ಕುಬೇರನಾಗುವಂತೆ ಸಕಲೈಶ್ವರ್ಯವನ್ನು ಕರುಣಿಸಿದ್ದು ಈ ಅಕ್ಷಯ ತೃತೀಯ ದಿನದಂದೆ. ಶ್ರೀ ಕೃಷ್ಣನ ಸಹೋದರ ಬಲರಾಮನ ಜನ್ಮದಿನವೂ ಹೌದು. ಈ ಕಾರಣದಿಂದಲೇ ರೈತರು ಬಲರಾಮನ ಆಯುಧವಾಗಿರುವ ನೇಗಿಲನ್ನು ಈ ಶುಭದಿನದಂದು ಭಕ್ತಿ ಭಾವದಿಂದ ಪೂಜಿಸುವರು. ಈ ದಿನದಂದು ಭಾರತೀಯರು ತ್ರಿಮೂರ್ತಿಗಳನ್ನು ಭಕ್ತಿ-ಶ್ರದ್ಧೆಗಳಿಂದ ಆರಾಧಿಸಿ ಸ್ಮರಿಸುವರು.

  ದಶಾವತಾರಗಳಲ್ಲಿ ಒಂದಾದ ಪರಶುರಾಮಾವತಾರ ಕೂಡ ಈ ದಿನವೇ ಆರಂಭಗೊಂಡದ್ದು. ಭಗೀರಥನ ಅವಿರತ ಪ್ರಯತ್ನದಿಂದ, ವಿಷ್ಣುವಿನ ಪಾದದಿಂದಾರಂಭಿಸಿ, ಶಿವನಿಂದ ವೇಗ ನಿಯಂತ್ರಿಸಲ್ಪಟ್ಟು ಗಂಗಾವತಾರವಾಗಿಸುವ ಶುಭದಿನವೂ ಇಂದೇ. ಮನುಕುಲವು ಮಾತೆಯೆಂದು ಪೂಜಿಸುವ ಗಂಗಾಮಾತೆಯು ತ್ರಿಲೋಕಗಳಲ್ಲಿ ಹರಿದು ಭೂಲೋಕದಲ್ಲಿ ನೆಲೆಸುವುದು ಈ ಪರ್ವ ದಿನದಂದು. ಸಿರಿದೇವಿಯಾದ ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸುವ ಅಷ್ಟದಿಕ್ಪಾಲಕರಲ್ಲಿ ಒಬ್ಬನಾಗಿರುವ ಕುಬೇರ, ಧನ್ಯತೆಯನ್ನು ಪಡೆಯುತ್ತಾನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.
  ಸಮುದ್ರ ಮಂಥನಕ್ಕೂ ಅಕ್ಷಯ ತೃತೀಯಕ್ಕೂ ನಂಟಿರುವ ಈ ದಿನವೇ ನಾರಾಯಣನ ಪಟ್ಟದರಸಿ ಲಕ್ಷ್ಮಿಯೂ ಜನ್ಮ ಪಡೆಯುತ್ತಾಳೆ. ಮಹಾಭಾರತದ ರಚನೆಗೆ ಗಣಪತಿಯು ವ್ಯಾಸರಿಗೆ ನೆರೆಯಾಗಿದ್ದು ಈ ದಿನವೇ.

  ಮಹಾಭಾರತದ ಕೌರವರು & ಪಾಂಡವರ ನಡುವೆ ಏರ್ಪಟ್ಟ ಜೂಜಾಟದಲ್ಲಿ ಯುದೀಷ್ಠಿರನು ಕೌರವರಿಗೆ ರಾಜ್ಯ, ಸೋದರರ ಜತೆಗೆ ಪತ್ನಿ ದ್ರೌಪದಿಯನ್ನ ಪಣವಾಗಿಟ್ಟು ಸೋಲನ್ನನುಭವಿಸಯತ್ತಾನೆ. ಕೌರವ ಸಹೋದರರು ಅಟ್ಟಹಾಸದ ನಗೆಬೀರುತ್ತಾ, ದುರುಳ ದುಃಶಾಸನ ದ್ರೌಪದಿಯ ವಸ್ತ್ರಾಪಹರಣ ಮಾಡಲು ಮುಂದಾಗುತ್ತಾನೆ. ದ್ರೌಪದಿಯು ‘ತ್ವಮೇಕಂ ಶರಣ್ಯಂ ತ್ವಮೇಕಂ ವರೇಣ್ಯಂ’ ಎಂದು ಶ್ರೀಕೃಷ್ಣನನ್ನು ಪ್ರಾರ್ಥಿಸುತ್ತಾಳೆ‌‌. ದುಃಶಾಸನ ದ್ರೌಪದಿಯ ಸೀರೆಯನ್ನು ಎಳೆಯುತ್ತಿದ್ದರೆ, ಶ್ರೀಕೃಷ್ಣ ಪರಮಾತ್ಮನು ಸೀರೆಯನ್ನು ಅಕ್ಷಯವಾಗಿಸಿ ದ್ರೌಪದಿಯ ಮಾನವನ್ನು ರಕ್ಷಿಸಿದ ದಿನವದು. ಪಾಂಡವರು ವನವಾಸದ ಸಂಕೋಲೆಯಲ್ಲಿ ಸಿಲುಕಿರುವಾಗ ಅತಿಥಿ ಸತ್ಕಾರಕೋಸ್ಕರ ಶ್ರೀಕೃಷ್ಣನು ಅಕ್ಷಯ ಪಾತ್ರೆಯನ್ನು ನೀಡಿ ಹರಸಿದ ಪಾವನ ದಿನವೂ ಇದಾಗಿದೆ. ಇದರ ಅನ್ವಯದಂತಯೇ ರಾತ್ರಿ ವೇಳೆ ಸ್ವಲ್ಪ ಊಟವನ್ನು ಪಾತ್ರೆಯಲ್ಲಿ ಉಳಿಸಬೇಕೆಂಬ ಆಚರಣೆ ಪ್ರತಿ ಮನೆಗಳಲ್ಲಿಯೂ ಇದೆ.

  ೧೨ನೇ ಶತಮಾನದ ಸಾಮಾಜಿಕ ಕ್ರಾಂತಿಯಲ್ಲಿ ಹೊಸ ಛಾಪು ಮೂಡಿಸಿದ ವಚನಜ್ಯೋತಿ ಶ್ರೀ ಬಸವೇಶ್ವರರ ಜನ್ಮದಿನವು ಅಕ್ಷಯ ತೃತೀಯ ದಿನದಂದೆ ಆಗಿದ್ದು. ಆಚಾರ್ಯ ಶಂಕರ ಭಗವತ್ಪಾದರು ಭಿಕ್ಷೆಯಲ್ಲಿ ನೆಲ್ಲಿಕಾಯಿ ನೀಡಿದ ಬಡ ಮಹಿಳೆಗೆ, ಕನಕಧಾರಾ ಸ್ತೋತ್ರವನ್ನು ಪಠಿಸಿ ನೆಲ್ಲಿಕಾಯಿ ಮಳೆ ತರಿಸುವುದರ ಮೂಲಕ ಆಕೆಯ ಬಡತನ ನಿವಾರಣೆ ಮಾಡಿದ್ದು ಈ ಅಕ್ಷಯ ತದಿಗೆ ಹಬ್ಬದಂದೆ. ಈ ನಂಬಿಕೆಯಂತೆ ಅಕ್ಷಯ ತದಿಗೆ ದಿನದಂದು ಚಿನ್ನವನ್ನು ಖರೀದಿಸುವುದರಿಂದ ಸಕಲ ಸಂಪತ್ತು ವೃದ್ಧಿಸುತ್ತದೆಂಬ ನಂಬಿಕೆ ನಮ್ಮ ಜನರದ್ದು. ಈ ವಿಶೇಷ ದಿನದಂದು ಸಜ್ಜನರ ಸಹವಾಸ, ಸದ್ಬಾವನೆ, ಸತ್ ಚಿಂತನೆ, ಸತ್ಯತನದಿಂದ ಜೀವನ ನಡೆಸಲು ಮುಂದಾದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಇಂದು ಮಾಡುವ ಅನ್ನದಾನ, ವಿದ್ಯಾದಾನ ಎಲ್ಲವೂ ಅಕ್ಷಯವಾಗುತ್ತದೆಂಬ ನಂಬಿಕೆಯ ಪ್ರಸ್ತಾಪ ಗ್ರಂಥಗಳಲ್ಲಿ ಅಡಕವಿದೆ.

  ಪೌರಾಣಿಕ ಮತ್ತು ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ಸಮೃದ್ಧಿಯ ಸಂಕೇತವಾಗಿರುವ ಅಕ್ಷಯ ತೃತೀಯ ದಿನದಂದು ಕೈಗೊಳ್ಳುವ ಶುಭ ಕಾರ್ಯಗಳು ಸಂಪನ್ನಗೊಂಡು ಜಯಶೀಲವಾಗುತ್ತವೆ ಎಂಬ ಜನರ ನಂಬಿಕೆಗೆ ಭಗವಂತನು ಕೃಪೆ ತೋರಲಿ ಎಂದು ಆಶಿಸೋಣ.

  • ಕಾವ್ಯ ಸಿ.ಪಿ. ಆಚಾರ್ಯ
   ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಮಾನಸಗಂಗೋತ್ರಿ

  NO COMMENTS

  LEAVE A REPLY