ಮಾನಸಗಂಗೋತ್ರಿ ಆವರಣದಲ್ಲಿ ಸರಸ್ವತಿಪುತ್ರ: ನನ್ನದೊಂದು ಅನುಭವ

  334
  0
  SHARE

  ಮಾನಸಗಂಗೋತ್ರಿ ಆವರಣದಲ್ಲಿ ಸರಸ್ವತಿಪುತ್ರ

  ಮೈಸೂರಿನ ಮಾನಸಗಂಗೋತ್ರಿಯಲ್ಲಿ ಆಗಷ್ಟೇ ಪತ್ರಿಕೋದ್ಯಮ ವಿಭಾಗಕ್ಕೆ ಪ್ರವೇಶ ಪಡೆದುಕೊಂಡಿದ್ದೆ. ಹಚ್ಚ-ಹಸಿರಿನ ಮಧ್ಯೆ ಇರುವಈ ಸುಂದರ ಕ್ಯಾಂಪಸ್ ನಲ್ಲಿ ನನಗೆ ಸೀಟು ಸಿಕ್ಕಿದ್ದೆ ನನ್ನ ದೊಡ್ಡ ಅದೃಷ್ಟವೆನಿಸಿತು. ಒಂದಿಷ್ಟು ಭಯ, ಕಾತುರ, ಕುತೂಹಲದೊಂದಿಗೆ ನನ್ನ ಪದವಿಯ ದಿನಗಳು  ಆರಂಭವಾದವು. ಇತರರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನನಗಂತೂ ಬೆಳೆಗ್ಗೆ ಎದ್ದ ಕೂಡಲೇ ವಾಯುವಿಹಾರಕ್ಕೆ ಹೋಗದೆ ಇದ್ದರೆ ಆ ದಿನ ಏನೋ ಕಸಿವಿಸಿ. ಹಸಿರಿನ ಸೀರೆಯುಟ್ಟು ಕಂಗೋಳಿಸುತ್ತಿರುವ ಮಾನಸಗಂಗೋತ್ರಿಯ ತುಂಬೆಲ್ಲಾ ತಿರುಗಾಡುವಾಗ ಎಲ್ಲೆಡೆ ಕಾಣುವ ಮುಗಿಲೆತ್ತರಕ್ಕೆ ಮುಖಮಾಡಿರುವ ಆಕಾಶಮಲ್ಲಿಗೆ, ಕಲರ್ ಕಲರ್ ಕಾಗದದ ಹೂಗಳು, ರಂಗು-ರಂಗಿನ ಗುಲ್ ಮೊಹರ್, ಚಿಟ್ಟೆಗಳು, ದುಂಬಿಗಳು, ಹಕ್ಕಿಗಳ ಚಿಲಿಪಿಲಿ ನಿನಾದ, ರಸ್ತೆಯುದ್ದಕ್ಕೂ ನನ್ನನ್ನು ಸ್ವಾಗತಿಸಲು ನಿಂತಿವಿಯೋ ಎಂಬಂತೆ ಕಂಡುಬರುವ ಸಾಲುಮರಗಳು, ಹುಲ್ಲುಗಳ ಮೇಲಿರುವ ಇಬ್ಬನಿ ಹನಿಗಳು, ನಯನ ಮನೋಹರ ಕುಕ್ಕರಹಳ್ಳಿ ಕೆರೆ ಇವುಗಳನ್ನೆಲ್ಲಾ ನೋಡುತ್ತ ಹೋಗುತ್ತಿದ್ದರೆ ಯಾವುದೋ ಮಾಯಾಲೋಕದಲ್ಲಿ ವಿಹರಿಸುತ್ತಿದ್ದೇನೋ ಎಂಬಂತಹ ಅನುಭವ.

  ಹೀಗೆ ನಾನು ಒಂದು ದಿನ ಎಂದಿನಂತೆ ಬೆಳಗಿನ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ನನ್ನ ಮುಂದೆ ತ್ರಿಮೂರ್ತಿಗಳಂತೆ ಮೂವರು ನಡೆದು ಹೋಗುತ್ತಿರುವುದು, ನನ್ನ ಗಮನ ಸೆಳೆಯಿತು. ಇಬ್ಬರ ಕೈಯಲ್ಲಿ ಊರುಗೋಲು ಹಿಡಿದುಕೊಂಡು ಹೋಗುತ್ತಿದ್ದ ಹಿರಿಯರಾಗಿದ್ದರೆ, ಮತ್ತೊಬ್ಬರು ಮೂವತ್ತು, ನಲವತ್ತು ವಯಸ್ಸಿನ ಆಸು ಪಾಸಿನವರು. ಲೋಕಾಭಿಮಾನರಾಗಿ ಮಾತನಾಡುತ್ತಾ ಹೋಗುತ್ತಿದ್ದ, ಅವರನ್ನು ಹಿಂಬಾಲಿಸುತ್ತಿದ್ದ ನನಗೆ ಅವರಲ್ಲಿ ಒಬ್ಬರನ್ನು ಎಲ್ಲೋ ನೋಡಿದ ಅನುಭವ. ಯಾಕೋ ನನ್ನ ಕಣ್ಣುಗಳನ್ನೇ ನಾನು ನಂಬಲಿಲ್ಲ. ಒಮ್ಮೆ ದಿಟ್ಟಿಸಿ ನೋಡಿದೆ, ಅನುಮಾನವೆಯೇ ಇರಲಿಲ್ಲ. ಅವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಎಸ್, ಎಲ್, ಭೈರಪ್ಪನವರು. ಇಷ್ಟುದಿನ ಅವರನ್ನು ಟಿ.ವಿ ಪತ್ರಿಕೆಗಳಲ್ಲಿ ನೋಡುತ್ತಿದ್ದ ನನಗೆ ಹೀಗೆ ಅನಿರೀಕ್ಷಿತವಾಗಿ ಕಣ್ಣಮುಂದೆ ಬಂದಾಗ ಏನು ಮಾತನಾಡಬೇಕೆಂದೇ ಗೊತ್ತಾಗದೇ ಬೆಕ್ಕಸಬೆರಗಾಗಿ ನಿಂತೆ. ಛೇ! ಭೈರಪ್ಪರವರಂತಹ ಬಹುದೊಡ್ಡ ವ್ಯಕ್ತಿಗಳು ಈ ರೀತಿ ಸಾಮಾನ್ಯವಾಗಿ ತಿರುಗಾಡಲು ಸಾಧ್ಯವೇ? ಎಂದು ಕೊಂಡು ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಪಕ್ಕದಲ್ಲಿ ಇದ್ದವರಿಗೆ ಸರ್! ಇವರು ಸಾಹಿತಿ ಭೈರಪ್ಪನವರಲ್ಲವಾ? ಎಂದು ಪೆದ್ದುತನಕ್ಕೆ ನಾನೇ ಪೇಚಾದೆ. ಹಾಗೆಯೇ ಸಾಹಿತ್ಯ ದಿಗ್ಗಜರಿಗೆ ವಂದಿಸುತ್ತಾ ಸರ್.. ನಿಮ್ಮನ್ನು ನೋಡಬೇಕೆಂದು ಬಹಳ ದಿನದ ಆಸೆಯಾಗಿತ್ತು.

  ಇಷ್ಟುದಿನ ನಿಮ್ಮನ್ನು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನೋಡುತ್ತಿದ್ದ ನನಗೆ ನೇರವಾಗಿ ನಿಮ್ಮನ್ನು ನೋಡಿ ಬಹಳ ಖುಷಿಯಾಗುತ್ತಿದೆ. ನಿಮ್ಮ ಹಲವಾರು ಕಾದಂಬರಿಗಳನ್ನು ಓದಿದ್ದೇನೆ. ಎಂದು ಒಂದಿಷ್ಟು ಅಳುಕಿನಿಂದಲೇ ಮಾತನಾಡಿದೆ. ಆಗ ಅವರು “ಏನ್ ಓದ್ತಾ ಇದ್ಯಪ್ಪಾ?” ಎಂದು ಪ್ರಶ್ನಿಸಿದಾಗ ನನ್ನಲ್ಲಿ ಏನೋ ಪುಳಕ. “ಸರ್ ಇಲ್ಲೆ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಪತ್ರಿಕೋದ್ಯಮ ವಿಭಾಗದಲ್ಲಿ ಓದುತ್ತಿದ್ದೇನೆ.” ಎಂದು ಹೇಳಿದಾಗ, “ಒಳ್ಳೆಯ ವಿಷಯ, ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೋ”, ಎಂದು ಹಸ್ತಲಾಘವ ಮಾಡಿ ಮುಂದೆ ಹೊರಡಲು ಅನುವಾದಾಗ ಒಂದಿಷ್ಟು ಭಯಮಿಶ್ರಿತ ಧ್ವನಿಯಲ್ಲಿ ಸರ್, ನಿಮ್ಮೊಂದಿಗೆ ಪೋಟೋ ತೆಗೆದುಕೊಳ್ಳಬಹುದಾ ಎಂದು ವಿನಂತಿಸಿದಾಗ ನಗುಮೊಗದಿಂದಲೇ ಸಮ್ಮತಿಸಿದರು.

  ತಕ್ಷಣ ಪ್ಯಾಂಟ್ ಜೇಬಿನಲ್ಲಿದ್ದ ಪೋನ್ ಹೊರತೆಗೆದಾಗ “ಯಾವ್ದಪ್ಪಾ ಮೊಬೈಲ್”? ಅಂತ ವಿಚಾರಿಸಿದಾಗ ಅದರ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದೆ. ಒಬ್ಬ ಮಹಾನ್ ಸಾಹಿತಿಯನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಸೆಲ್ಪಿ ತೆಗೆಸಿಕೊಳ್ಳುವುದು, ನನಗೆ ಸರಿಯಲ್ಲವೆನಿಸಿ ಪಕ್ಕದಲ್ಲಿದ್ದವರಿಗೆ ಸ್ವಲ್ಪ ಸಂಕೋಚದಿಂದ “ಸರ್ ಪ್ಲೀಸ್ ಎಂದಾಗ ಅವರು ನಗುತ್ತಲೇ ನನ್ನ ಮೊಬೈಲ್ ತೆಗೆದುಕೊಂಡು ಒಂದು ಪೋಟೋ ಕ್ಲಿಕ್ಕಿಸಿದರು. ನಂತರ ಅವರಿಗೆ ಧನ್ಯವಾದ ತಿಳಿಸಿ ವಿದ್ಯಾರ್ಥಿ ನಿಲಯದ ಕಡೆ ಹೆಜ್ಜೆ ಹಾಕಿದೆ. ಅವರ ಜೊತೆ ತೆಗೆಸಿಕೊಂಡ ಪೋಟೋವನ್ನು ನನ್ನ ಗೆಳೆಯರ ಬಳಿ ತೋರಿಸಿದಾಗ ಅವರೆಲ್ಲಾ ಅಚ್ಚರಿಗೊಂಡರು. ನನ್ನಂತಹ ಸಾಹಿತ್ಯಾನುಸಕ್ತರಿಗೆ ಭೈರಪ್ಪನವರೇ ಸೂಪರ್ ಸ್ಟಾರ್ ಅಲ್ಲವೇ? ಸರಸ್ವತಿ ಸಮ್ಮಾನ್, ಕೇಂದ್ರಸಾಹಿತ್ಯ ಅಕಾಡೆಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕತ, ಅಪರೂಪದ ಮಹಾನ್ ಕಾದಂಬರಿಕಾರರನ್ನು ಭೇಟಿ ಮಾಡಿದ್ದು, ನನ್ನ ಜೀವನದಲ್ಲೇ ಮರೆಯಲಾಗದ ಸಂದರ್ಭ.

  ಕೆಲವು ಗೌರವಯುತ ವ್ಯಕ್ತಿಗಳನ್ನು ಭೇಟಿಮಾಡುವ ಉದ್ದೇಶವನ್ನು ಇಟ್ಟುಕೊಂಡು ಅವರನ್ನು ಭೇಟಿ ಮಾಡಿದ ಸಂದರ್ಭಗಳು ಒಂದು ರೀತಿಯ ಅನುಭವಗಳನ್ನು ನೀಡಿದರೇ, ಮಹಾಪುರುಷರು ಆಕಸ್ಮಿಕವಾಗಿ ನಮ್ಮ ಕಣ್ಣಿಗೆ ಕಾಣುವಾಗ ಆ ಕ್ಷಣ, ತುಂಬಿ ಬರುವ ಸಂತೋಷ, ಆಶ್ಚರ್ಯ, ಆ ಗಳಿಗೆಯಲ್ಲಿ ಸಾಧಿಸಿದೆ ಎಚಿದ ಉತ್ಸಾಹ ಹಲವು ದಿನಗಳವರೆಗೆ ಆ ನೆನಪು ಮರುಕಳಿಸುತ್ತಾ ಇರುವುದು ನಿಜಕ್ಕೂ ಅವಿಸ್ಮರಣೀಯ. ಅದರಲ್ಲೂ ನಮ್ಮಂತಹ  ಗ್ರಾಮೀಣ ಭಾಗದವರಿಗೆ ಮನಸ್ಸಿನಲ್ಲಿ ಚಿರಕಾಲ ಉಳಿಯುವ ಸವಿನೆನಪು ಅದು. ಇಂತಹ ಅನುಭವಗಳು ಎಸ್.ಎಲ್.ಭೈರಪ್ಪನವರ ಆಕಸ್ಮಿಕವಾದ ಭೇಟಿಯಿಂದ ಆಗಿರುವುಸು ನನಗೆ ತುಂಬಾ ಸಂತೋಷ ತಂದಿರುವುದು.

  ಸಮಾಜಮುಖಿ ವ್ಯಕ್ತಿಗಳು, ಮಹಾಪುರುಷರು, ಸಾಧಕರು ನಮ್ಮ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು, ಸಾಧಕರ ಸಮಾಜ ನಿರ್ಮಾಣವಾಗಿ ಸಾಧಕರಿಂದಲೇ ಈ ಸಮಾಜ ತುಂಬಿಕೊಂಡಿರಬೇಕು. ಈ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೇನಿಸಿತು.

  “ಬದುಕಿನಲ್ಲಿ ಮಾಡಬೇಕು ಸಾಧನೆಯನ್ನ
  ಜನ ಮೆಚ್ಚುವ ಕಾರ್ಯವನ್ನ
  ಬದುಕಿನಲ್ಲಿ ತಿಳಿಯಬೇಕು ಜ್ಞಾನಭಂಡಾರವನ್ನ
  ಬದುಕಿನಲ್ಲಿ ನೀಡಬೇಕು ಸಮಾಜಕ್ಕೆ
  ಒಂದು ಉತ್ತಮ ಕೊಡುಗೆಯನ್ನ”
  ಪ್ರೋತ್ಸಾಹಿಸುವುದು ಇದನ್ನೆಲ್ಲ
  ಒಬ್ಬ ಉತ್ತಮ ವ್ಯಕ್ತಿಯ ಭೇಟಿಯಲ್ಲಿ.

  -ಕಿರಣ್ ಕುಮಾರ್.ಆರ್. ಸತ್ತೆಗಾಲ
   ಪತ್ರಿಕೋದ್ಯಮ ವಿದ್ಯಾರ್ಥಿ
   ಮಾನಸ ಗಂಗೋತ್ರಿ , ಮೈಸೂರು

  NO COMMENTS

  LEAVE A REPLY