ಗಂಗೋತ್ರಿಯಲ್ಲೊಂದು ಮುಂಜಾನೆಯ ವಿಹಂಗಮ ನೋಟ:

  326
  0
  SHARE

  ಗಂಗೋತ್ರಿಯಲ್ಲೊಂದು ಮುಂಜಾನೆಯ ವಿಹಂಗಮ ನೋಟ:
  ಮುಂಜಾನೆ 6 ಘಂಟೆಗೆ ಗಂಗೋತ್ರಿಯಲ್ಲಿ ವಾಕಿಂಗ್ ಮಾಡಲು ಆರಂಭಿಸಿದ ನನಗೆ ಮನಸ್ಸು ಉಲ್ಲಾಸಗೊಂಡಿತು. ಏಕೆಂದರೆ ಮುಂಜಾನೆಯ ಮಂಜಿನ ಕವಳ ಆವರಣವನ್ನು ಆಕ್ರಮಿಸಿ ಬೆಳ್ಮೋಡಗಳ ನಡುವೆ ಹೋಗುವಂತೆ ಭಾಸವಾಗುತ್ತಿತ್ತು. ಹಕ್ಕಿಗಳ ಚಿಟಪಟ ಚಿಟಪಟ ಶಬ್ದವು ಕೋಗಿಲೆಯ ಗಾನದಂತೆ ಮಧುರವಾಗಿ ನನ್ನ ಕರ್ಣಗಳನ್ನು ಇಂಪಾಗಿಸಿತು. ಕರಿಮುಗಿಲ ಮಡಿಲಿನಲ್ಲಿ ಉದಯಿಸುತ್ತಿದ್ದ ಆ ರವಿಯ ಮನೋಹರ ದೃಶ್ಯವನ್ನು ನನ್ನ ಕಣ್ಣ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿರುವುದು ಅಚ್ಚಳಿಯದೆ ಉಳಿದಿದೆ. ಮೈನವಿರೇಳಿಸೋ ಆ ಕೊರೆಯುವ ಚಳಿಯಲ್ಲಿ ಪ್ರಕಾಶವಾದ ಸೂರ್ಯನ ಕಿರಣರಾಶಿಗಳು ನನ್ನ ಮೈ ಸ್ಪರ್ಶಿಸಿ ಬೆಚ್ಚಗೆನಿಸಿದವು. ಆಹಾ ಅದೆಷ್ಟು ಸುಂದರ ನಮ್ಮ ಗಂಗೋತ್ರಿ ಎಂದು ಪ್ರಕೃತಿಯ ವಿಸ್ಮಯ ರೂಪವನ್ನು ನಾ ಕಂಡು ಅನುಭವದೀ ಆನಂದಿಸಿದೆ.

  ಮನಸ್ಸು ತಲ್ಲಣಗೊಂಡು ಉತ್ಸುಕತೆಯಿಂದ ವಾಕಿಂಗ್ ಮಾಡಲು ಮುನ್ನೆಡೆದೆ. ಅಲ್ಲೊಂದು ಗುಂಪು ಗಹಗಹಿಸಿ ನಗುವ ಶಬ್ದ ಕೇಳಿತು. ಹಾಗೆ ಮುಂದೆ ಸಾಗಿ ಅಲ್ಲಿ ನೋಡಿದರೆ ಸುಮಾರು 70- 75 ರ ವಯಸ್ಸಾದ ತಾತಂದರರು ಮಾತಿನ ಚಕಮಕಿಯಲ್ಲಿ ಮುಳುಗಿದ್ದರು. ಅಲ್ಲೆ ವ್ಯಾಯಾಮ ಮಾಡಲೆಂದು ನಿರತಳಾದ ನಾನು ಅಜ್ಜರ ಚರ್ಚೆಗೆ ಕಿವಿಯಿಟ್ಟು , ಅವರು ಮಾತನಾಡುತ್ತಿದ್ದ ರಾಜಕೀಯ ವಿಚಾರಗಳು, ಸರ್ಕಾರದ ಯೋಜನೆಗಳ ವಾದ ವಿವಾದದ ಬಗ್ಗೆ ಅವರ ಅಭಿಪ್ರಾಯಗಳನ್ನು ಆಲಂಗಿಸಿಕೊಂಡೆ. ಆವರಣದ ಸುತ್ತ ಹುಡುಗರು ಜಾಗಿಂಗ್ ಮಾಡುವುದರಲ್ಲಿ ನಿರತರಾಗಿದ್ದರು. ಅಷ್ಟರಲ್ಲಿ ಟ್ರಿಣ್ ಟ್ರಣ್ ಎಂದು ಶಬ್ದ ಕೇಳಿತು. ಆ ಕಡೆ ತಿರುಗಿ ನೋಡಿದರೆ ಮೂರ್ನಾಲ್ಕು ಹುಡುಗಿಯರು ಸಾಲಾಗಿ ಸೈಕಲ್ ತುಣಿಯುತ್ತಾ ಗಂಗೋತ್ರಿ ಕ್ಯಾಂಪಸ್ ರೌಂಡ್ ಹೊಡೆಯುತ್ತಾ ವಾಯುವಿಹರಿಸುತ್ತಿದ್ದರು.

  ಮತ್ತೆ ವ್ಯಾಯಾಮ ಮುಂದುವರಿಸಲು ಇತ್ತ ತಿರುಗಿದೆ. ಆ ವೇಳೆಗಾಗಲೆ ಆ ಬದಿಯಿಂದ ಒಬ್ಬ ತಾತ ಅಜ್ಜಿಯ ಕೈಹಿಡಿದು ನಿಧಾನವಾಗಿ ವಾಕಿಂಗ್ ಕರೆದುಕೊಂಡು ಬರುತ್ತಿದ್ದರು‌. ಅದ ಕಂಡ ನನ್ನ ಮನ ಪುಳಕಿತಗೊಂಡು ಈ ವಯಸ್ಸಿನಲ್ಲೂ ಅಜ್ಜ- ಅಜ್ಜಿಯರ ಪ್ರೀತಿ ಬಾಂದವ್ಯ ನವಜೋಡಿಗಳಿಗೇನು ಕಡಿಮೆ ಇಲ್ಲ ಎಂದು ಬಾವಿಸಿತು. ಪ್ರೀತಿಗೆ ವಯಸ್ಸಿನ ಹಾಗು ಸಂಬಂಧದ ಪರಿವಿಲ್ಲ. ಅಂತೆಯೇ ಅಲ್ಲಿ ಒಬ್ಬ ತಂದೆ ತನ್ನ ಮಗಳಿಗೆ ಬೈಕ್ ಕಲಿಸುವುದರ ಜೊತೆಗೆ ಅವಳಲ್ಲಿ ಆತ್ಮವಿಶ್ವಾಸದ ಧೈರ್ಯ ತುಂಬುತ್ತಾ ಮಗಳ ಭಯವನ್ನು ದೂರ ಮಾಡಿ ಮುನ್ನೆಡೆದರು.

  ಅಜ್ಜ ಅಜ್ಜಿಯರ ಬಾಂದವ್ಯದ ಪ್ರೀತಿ ಮತ್ತು ಅಪ್ಪ ಮಗಳ ಆತ್ಮಸ್ಥೈರ್ಯ ಬಂಧವನ್ನು ಕಣ್ತುಂಬಿ ಕೊಳ್ಳುವ ಅಷ್ಟರಲ್ಲೆ ಅಮ್ಮಾ ನಾನ್ ಫಸ್ಟ್ ನಾನ್ ಫಸ್ಟ್ ಅನ್ನೋ ಮುದ್ದು ಮುದ್ದು ಮಾತು ಕೇಳಿಸಿತು. ಅಲ್ಲಿ ನೋಡಿದಾಗ ಪುಟ್ಟ ಮಕ್ಕಳಿಬ್ಬರು ಅಮ್ಮನ ಕೈಬೆರಳನ್ನು ಬಿಡಿಸಿಕೊಂಡು ನಾ ಮುಂದೆ ತಾ ಮುಂದೆ ಅಂತ ಹೇಳತ್ತಿದ್ದರು.

  ಅಮ್ಮ ಮತ್ತೆ ಕೈ ಹಿಡಿದು ಮಕ್ಕಳೊಂದಿಗೆ ವಾಕ್ ಮಾಡುತ್ತಾ ಮುಂದೋದರು. ಅರರೇ ಏನಪ್ಪಾ ಈ ಮುಂಜಾನೆಯಲ್ಲಿ ನಾವುಗಳೆ ಎದ್ದು ಬಂದು ವಾಕ್ ಮಾಡಲು ಸೋಮಾರಿಗಳಾಗಿರುತ್ತೇವೆ. ಆದರೆ ಈ ಮಕ್ಕಳು ವಾಕ್ ಮಾಡಲು ಬಹಳ ಉತ್ಸುಕರಾಗಿ ಬಂದದ್ದನ್ನು ಕಂಡು ಸಂತಸವಾಯಿತು. ಈ ಎಲ್ಲಾ ಸ್ನೇಹ ಬಾಂಧವ್ಯಗಳನ್ನು ಕಂಡು ಮನಸ್ಸಿಗೆ ಅದೇನೊ ಒಂದು ತರಹದ ನೆಮ್ಮದಿ ಸಿಕ್ಕಂತಾಯಿತು. ಆಗ ಅಲ್ಲೆ ಸೂರ್ಯಾಭಿಮುಖವಾಗಿ ಕುಳಿತು ಧ್ಯಾನ ಮಾಡುವಲ್ಲಿ ತಲ್ಲೀಣಳಾದೆ. ನಂತರ ಆ ದಿನವಿಡೀ ಚೈತನ್ಯದಿಂದ ನನ್ನ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡೆ.

  ಆದರೆ ಈ ವಿಚಾರವಾಗಿ ನನಗನಿಸಿದೇನೆಂದರೆ ವಯಸ್ಸಿನ ಅಂತರವಿಲ್ಲದೆ ಮಕ್ಕಳು, ಯುವಕರು, ಅಜ್ಜ ಅಜ್ಜಿಯರು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವಾಕಿಂಗ್, ವ್ಯಾಯಾಮ ಮಾಡಲು ಇಲ್ಲಿ ಬರುತ್ತಾರೆ. ಅವರ ಆರೋಗ್ಯದ ಜೊತೆಗೆ ಸ್ನೇಹ ಬಾಂದವ್ಯವನ್ನು ಬೆಸೆಯುವ ಸೌಹಾರ್ದತೆಯಲ್ಲಿ ನಮ್ಮ ಗಂಗೋತ್ರಿ ಕ್ಯಾಂಪಸ್ ವಾಯುವಿಹಾರ ಸ್ಥಳವಾಗಿರುವುದು ಸಂತಸದ ಸಂಗತಿ.

  ಮುಂಜಾನೆ ಗಂಗೋತ್ರಿಗೆ ವಾಕಿಂಗ್ ಎಂದು ಬರುವ ಪ್ರತಿಯೊಬ್ಬರ ಮೊಗದಲ್ಲೂ ಉಲ್ಲಾಸದ ಚೈತನ್ಯ ತುಂಬಿಕೊಂಡಿರುತ್ತದೆ. ತಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಸದೃಡತೆ, ಆತ್ಮವಿಶ್ವಾಸ, ಮನೋಲ್ಲಾಸ ಹೊಂದುತ್ತಾರೆಂಬ ಪ್ರತಿಬಿಂಬ ಗೋಚರಿಸುತ್ತಿತ್ತು. ಅದೇ ಉಮ್ಮಸ್ಸು ಮುಂಜಾನೆ ವಾಕಿಂಗ್ ಹೋಗುವುದು ಪ್ರತಿದಿನದ ಹವ್ಯಾಸವಾಗಿ ಬದಲಾಗುತ್ತದೆ. ಅಂತೆಯೇ ಗಂಗೋತ್ರಿಯ ಈ ವಿಹಂಗಮ ವಿಹಾರ ನೋಟವು ನನ್ನ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತದೆ.
  -ಕಾವ್ಯ ಸಿ.ಪಿ. ಆಚಾರ್ಯ
  ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

  NO COMMENTS

  LEAVE A REPLY