ಸಮಾಜದ ಶಾಂತಿ ಕೆಡಿಸುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕಬೇಡಿ: ಹೆಚ್,ಡಿಕೆ

ಸಮಾಜದ ಶಾಂತಿ ಕೆಡಿಸುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕಬೇಡಿ: ಹೆಚ್,ಡಿಕೆ

359
0
SHARE

ಮಂಗಳೂರು(ಫೆ.7.2018): ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಎಲ್ಲೆಡೆ ಜಾತಿ, ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟುಹಾಕಿ ಮತೀಯವಾದ ರಾಜಕೀಯ ಮಾಡಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಎರಡು ರಾಷ್ಟ್ರೀಯ ಪಕ್ಷಗಳನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತೊಲಗಿಸುವ ಅನಿವಾರ್ಯತೆಯಿದೆ ಎಂದು ಜೆಡಿಎಸ್‌ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.

ನಗರದ ಪುರಭವನದಲ್ಲಿ ದ.ಕ. ಜಾತ್ಯತೀತ ಜನತಾದಳದಿಂದ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ, ನಿರುದ್ಯೋಗ, ಮಹಿಳೆ ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳು ಈ ವಿಷಯಕ್ಕೆ ಆದ್ಯತೆ ನೀಡುತ್ತಿಲ್ಲ. ಪ್ರಜ್ಞಾವಂತರು, ವಿದ್ಯಾವಂತರ ನಾಡಿನಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಕೀಳು ಮನೋಭಾವದ ವ್ಯಕ್ತಿಗಳನ್ನು ಮಂಗಳೂರಿನ ಜನತೆ ಇನ್ನೆಷ್ಟು ದಿನ ಸಹಿಸಿಕೊಳ್ತೀರಾ? ಜಿಲ್ಲೆಯ ಯುವಕರಲ್ಲಿ ಭಾವನಾತ್ಮಕ ವಿಷಯಗಳನ್ನು ಬಿತ್ತಿ ಕೋಮುದಳ್ಳುರಿಗೆ ತಳ್ಳಿ ಜೈಲಿಗೆ ಕಳುಹಿಸಲಾಗುತ್ತಿದೆ. ಪವಿತ್ರ ದೇವಸ್ಥಾನ, ಚರ್ಚು, ಮಸೀದಿಗಳಿರುವ ಪುಣ್ಯ ಕ್ಷೇತ್ರದಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ. ಒಂದು ಪಕ್ಷ ಸೀಮೆಎಣ್ಣೆ ಸುರಿದರೆ, ಮತ್ತೊಂದು ಪಕ್ಷ ಬೆಂಕಿ ಇಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಶಾಂತಿ ಸೌಹಾರ್ದತೆಗೆ ಒತ್ತುನೀಡಿ ಆಡಳಿತ ನಡೆಸುವ ಜಾತ್ಯತೀತತೆ ನಿಲುವಿನ ಜೆಡಿಎಸ್‌ನ್ನು ರಾಜ್ಯದ ಜನತೆ ಬೆಂಬಲಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯ ಸರಕಾರ ತೆರಿಗೆ ಹಣ ಲೂಟಿ ಮಾಡಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರಕಾರ ಸರ್ವನಾಶವಾಗುವುದು ನಿಶ್ಚಿತ. ದೇಶದ ಪ್ರಧಾನಮಂತ್ರಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸೇರಿದಂತೆ ಎರಡು ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ ನಾಯಕರು ರಾಜ್ಯಕ್ಕೆ ಲಗ್ಗೆಯಿಡುತ್ತಿದ್ದಾರೆ. ಆದರೆ ಜೆಡಿಎಸ್‌ ಮಾತ್ರ ಏಕಾಂಗಿ ಹೋರಾಟ ಮಾಡುತ್ತಿದೆ. ಸಮಾಜವಾದಿ ಪಕ್ಷದ ಮಾಯಾವತಿ ಜೆಡಿಎಸ್‌ ಬೆಂಬಲ ನೀಡಿರುವುದು ನಮ್ಮ ಶಕ್ತಿ ಹೆಚ್ಚಿಸಿದೆ. ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ ಬದಲಾವಣೆ ತರಲಿದ್ದು, ಜೆಡಿಎಸ್‌ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಈ ನಾಡಿನ ಅಲ್ಪಸಂಖ್ಯಾತರು ಮಾತ್ರವಲ್ಲದೆ, ಎಲ್ಲರಿಗೂ ರಕ್ಷಣೆ ನೀಡುವ ಕೆಲಸ ಮಾಡಲಿದೆ. ಅಭಿವೃದ್ಧಿ, ಉದ್ಯೋಗ, ಉತ್ತಮ ಶಿಕ್ಷಣ, ಆರೋಗ್ಯ ವಿಶೇಷ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಮನೆಮನೆಗೆ ಹೋಗಿ ಕಾರ‍್ಯಕರ್ತರು ಜೆಡಿಎಸ್‌ ಪರ ಮತಯಾಚನೆ ಮಾಡಬೇಕಾಗಿದೆ. ಆಗ ಮಾತ್ರ ಬದಲಾವಣೆ ಮಾಡಲು ಸಾಧ್ಯವಿದೆ ಎಂದರು.

NO COMMENTS

LEAVE A REPLY