ರೋಹಿಣಿ ಸಿಂಧೂರಿ ಸೇರಿದಂತೆ 9 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ..

ರೋಹಿಣಿ ಸಿಂಧೂರಿ ಸೇರಿದಂತೆ 9 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ..

234
0
SHARE

ಹಾಸನ(ಮಾ.3.2018) : ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆ ತಡೆಹಿಡಿಯುವಂತೆ ಚುನಾವಣಾ ಆಯೋಗ ನೀಡಿದ್ದ ಗಡುವು ಮುಗಿದ ಕೂಡಲೇ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ 9 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿದ್ಧಪಡಿಸಿರುವ ರಾಜ್ಯ ಸರ್ಕಾರ, ಈ ಪಟ್ಟಿಯನ್ನು ಚುನಾವಣಾ ಆಯೋಗದ ಅವಗಾಹನೆಗೆ ರವಾನಿಸಿದೆ.

ಮೂಲಗಳ ಪ್ರಕಾರ ಈ ಪಟ್ಟಿಗೆ ಆಯೋಗದಿಂದ ಆಕ್ಷೇಪಣೆ ಬಾರದಿದ್ದಲ್ಲಿ ಸರ್ಕಾರ ಶನಿವಾರ ವರ್ಗಾವಣೆ ಆದೇಶ ಹೊರಡಿಸಲಿದೆ ಎಂದು ಮೂಲಗಳು ಹೇಳಿವೆ. ಈ ಮೂಲಗಳ ಪ್ರಕಾರ ರೋಹಿಣಿ ಸಿಂಧೂರಿ ಅವರನ್ನು ಉದ್ಯೋಗ ಹಾಗೂ ತರಬೇತಿ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗುತ್ತದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್ ಅವರ ಹೆಸರೂ ವರ್ಗಾವಣೆ ಪಟ್ಟಿಯಲ್ಲಿದ್ದು, ಅವರಿಗೆ ಹುದ್ದೆ ತೋರಿಸಿಲ್ಲ. ಇನ್ನು, ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಇತ್ತೀಚೆಗೆ ಐಎಎಸ್ ಹುದ್ದೆಗೆ ಪದೋನ್ನತಿಗೊಂಡ ದಯಾನಂದ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮೈಸೂರು ಜಿಲ್ಲಾಧಿಕಾರಿ ರಂದೀಪ್ ಅವರನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಗೆ, ವಿಜಯಪುರ ಜಿಲ್ಲಾಧಿಕಾರಿ ಶಿವಕುಮಾರ್ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ, ಕ್ಯಾ.ರಾಜೇಂದ್ರ ಅವರನ್ನು ರಾಮನಗರ ಜಿಲ್ಲಾಧಿಕಾರಿ ಹುದ್ದೆಗೆ, ರಾಮನಗರ ಜಿಲ್ಲಾಧಿಕಾರಿಯಾಗಿದ್ದ ಮಮತಾ ಅವರನ್ನು ಯುವ ಜನ ಸೇವಾ ಇಲಾಖೆ ಆಯುಕ್ತ ಹುದ್ದೆಗೆ ಹಾಗೂ ಕೋಲಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾವೇರಿ ಅವರನ್ನು ಚಾಮರಾಜನಗರ ಡಿಸಿಯಾಗಿ ವರ್ಗಕ್ಕೆ ಮುಂದಾಗಿದೆ.

ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಕೆಲ ವಾರಗಳ ಹಿಂದೆ ವರ್ಗಾವಣೆ ಮಾಡಿತ್ತು. ಆದರೆ, ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಗೊಂಡಿದ್ದ ಹಿನ್ನೆಲೆಯಲ್ಲಿ ಫೆ.28ರವರೆಗೂ ವರ್ಗಾವಣೆಯನ್ನು ಚುನಾವಣಾ ಆಯೋಗ ನಿರ್ಬಂಧಿಸಿತ್ತು. ಈಗ ಈ ಗಡುವು ಮುಗಿದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದು, 9 ಮಂದಿ ಐಎಎಸ್ ಹಾಗೂ 12 ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಚುನಾವಣಾ ಆಯೋಗಕ್ಕೆ ರವಾನಿಸಿದೆ.

NO COMMENTS

LEAVE A REPLY