ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕಮಲ್ ಹಾಸನ್ ಆಗ್ರಹ…….

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕಮಲ್ ಹಾಸನ್ ಆಗ್ರಹ…….

149
0
SHARE

ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ನಿರಾಸಕ್ತಿ ತೋರಿಸಿರುವ ಬೆನ್ನಲ್ಲೇ ‘ಮಕ್ಕಳ್ ನೀದಿ ಮಯ್ಯಂ’ ಪಕ್ಷದ ಸ್ಥಾಪಕ ಕಮಲ್ ಹಾಸನ್ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿದ್ದಾರೆ.

ಕಾವೇರಿ ಜಲವಿವಾದ ಕುರಿತು ಸುಪ್ರೀಂ ನೀಡಿರುವ ತೀರ್ಪನ್ನು ಕೇಂದ್ರ ಸರಕಾರ ಗೌರವಿಸಬೇಕು. ನಿಯಮಗಳು ಜಾರಿಯಾಗಿವೆ ಅಂತ ಖಚಿತಪಡಿಸಿಕೊಳ್ಳಲು ಆರು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ಎಂಬ ಸುಪ್ರೀಂ ತೀರ್ಪನ್ನು ಸರಕಾರ ಗೌರವಿಸಿ ಮಂಡಳಿಯನ್ನು ರಚಿಸಬೇಕು ಎಂದಿದ್ದಾರೆ ಕಮಲ್.

ವಾರದ ಹಿಂದಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿಚೆನ್ನೈಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಎಷ್ಟು ಸಮಯ ಬೇಕಾಗುತ್ತದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಇಂತಿಷ್ಟೇ ಸಮಯ ಬೇಕಾಗುತ್ತದೆ ಎಂಬುದನ್ನು ತಿಳಿಸಲು ನಿರಾಕರಿಸಿದ್ದರು. ‘ಇದು ದೊಡ್ಡ ಕಾರ್ಯ. ಈ ಬಗ್ಗೆ ನಾನು ಯಾವುದೇ ಆಶ್ವಾಸನೆ ನೀಡಲು ಸಾಧ್ಯವಿಲ್ಲ’ ಎಂದಿದ್ದರು.

ಇದೇ ಸಂದರ್ಭದಲ್ಲಿ ತಮಿಳುನಾಡಿನ ರೈತರ ಅವಸ್ಥೆ ಬಗ್ಗೆ ಮರುಗಿದ್ದರು. ತಾವೂ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಕಾರಣ, ಕುಡಿಯಲು ಮತ್ತು ಕೃಷಿಗೆ ನೀರಿಲ್ಲದಿದ್ದರೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬ ಅರಿವಿದೆ ಎಂದಿದ್ದರು.

ಇನ್ನೊಂದು ಕಡೆ ತಮಿಳುನಾಡು ಸರಕಾರ ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸರ್ವ ಪಕ್ಷಗಳ ನಿಯೋಗ ರಚಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎದ್ದಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಪ್ರಧಾನಿ ಅವರನ್ನು ಭೇಟಿಯಾಗಲಿದ್ದು ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಮನವಿ ಮಾಡಲಿದೆ. ಆದರೆ ಕಮಲ್ ಹಾಸನ್‍ರನ್ನು ಹೊರಗಿಡಲಾಗಿದೆ.

NO COMMENTS

LEAVE A REPLY