ನಮ್ಮ ಮಕ್ಕಳ ಅಪೌಷ್ಠಿಕತೆಗೆ, ನಾವೇ ಕಾರಣರಾಗುತ್ತಿದ್ದೇವೆ…!

  637
  0
  SHARE

  ನಮ್ಮ ಮಕ್ಕಳ ಅಪೌಷ್ಠಿಕತೆಗೆ, ನಾವೇ ಕಾರಣರಾಗುತ್ತಿದ್ದೇವೆ.

  ನಾವು ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳಲ್ಲಿ ‘ಹಾಲು’ ಕೂಡ ಒಂದು. ಹಾಲು ಪ್ರಮುಖವಾಗಿ ದ್ರವರೂಪದ ವಸ್ತುವಾಗಿದ್ದು, ಅದು ಕೇವಲ ದ್ರವರೂಪದ ವಸ್ತುವಾಗಷ್ಟೇ ಉಳಿದುಕೊಳ್ಳದೆ ಮನುಷ್ಯನ ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶಗಳಾದ ಪ್ರೋಟಿನ್, ವಿಟಮಿನ್ (ಎ,ಬಿ,ಡಿ,ಇ ಮತ್ತು ಬಿ12) ಹಾಗೂ ಕ್ಯಾಲ್ಸಿಯಂಯುಕ್ತ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಈ ಕಾರಣಕ್ಕಾಗಿಯೇ ಮೇಲ್ವರ್ಗದ ಜನರ ಹಾದಿಯಾಗಿ ಸಾಮಾನ್ಯರಲ್ಲಿಯೂ ಸಾಮಾನ್ಯ ಜನ ಸಮುದಾಯವೂ ಕೂಡ ಪೌಷ್ಠಿಕಾಂಶದ ಪೂರೈಕೆಗಾಗಿ ಹಾಲನ್ನೇ ಅಲವಂಭಿಸಿದ್ದಾರೆ.

  ಹಸುವಿನ ಹಾಲು ಎಷ್ಟು ಮುಖ್ಯವಾದುದ್ದೆಂದರೆ, 100 ಗ್ರಾಂ ಹಸುವಿನ ಹಾಲು 66 ಕ್ಯಾಲರಿಗಳನ್ನಷ್ಟು ಚೈತನ್ಯವನ್ನೊದಗಿಸುತ್ತದೆ. ಅದರ ಜೊತೆಗೆ 3.4% ಪ್ರೋಟಿನ್, 3.6% ಕೊಬ್ಬು ಮತ್ತು 4.6% ಲ್ಯಾಕ್ಟೋಸ್ ಅನ್ನು ಕೂಡ ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ 250 ಮಿಲಿ, ಒಂದು ಲೋಟದ ಹಾಲಿನಲ್ಲಿ ಎಷ್ಟೆಲ್ಲಾ ಪೌಷ್ಠಿಕಾಂಶಗಳಿರುತ್ತವೆ ಎಂಬುದನ್ನು ಈ ಕೆಳಕಂಡಂತೆ ನೋಡೋಣ,

  285 ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ
  2 ಗ್ರಾಂ ಗಳಷ್ಟು ಪ್ರೋಟೀನ್ ವಿಟಮಿನ್ – ಡಿ ಮತ್ತು ಕೆ (ಮೂಳೆಗಳ ಆರೋಗ್ಯಕ್ಕೆ) ಅಯೋಡಿನ್ (ಥೈರಾಯ್ಡ್ ಗ್ರಂಥಿಗೆ ಅವಶ್ಯಕ)
  ವಿಟಮಿನ್ ಬಿ12 ಮತ್ತು ರೈಬೋಫ್ಲಾಮಿನ್ (ರಕ್ತ ಪರಿಚಲನೆಗೆ) ವಿಟಮಿನ್ ಬಿ (ದೇಹದಲ್ಲಿ ಶಕ್ತಿ ಉತ್ಪಾದನೆಗೆ)ವಿಟಮಿನ್ ಎ (ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು) ಇತ್ಯಾದಿ.

  ಈ ಮೇಲ್ಕಂಡಂತೆ ನಾನಾವಿಧದಲ್ಲಿ ಹಸುವಿನ ಹಾಲು ಮಾನವನ ಆರೋಗ್ಯಕ್ಕೆ ಪೂರಕವಾಗಿದೆ. ಇಷ್ಟೆಲ್ಲಾ ಅಂಶಗಳನ್ನು ಒಳಗೊಂಡಿರುವ ಹಾಲನ್ನು ನಿಜವಾಗಿಯೂ ಹಿರಿಯರು, ವಯಸ್ಕರು ಮತ್ತು ಮಕ್ಕಳು ನಿಯಮಿತವಾಗಿ ಬಳಸುತ್ತಿದ್ದಾರ? ಅಥವಾ ಬೇರೊಂದು ರೀತಿಯಲ್ಲಿ ಇದು ಪೋಲಾಗುತ್ತಿದೆಯ ಎಂಬುದನ್ನು ಮನಗಾಣಬೇಕಾಗಿದೆ. ಭಾರತದಲ್ಲಿ ಹಾಲನ್ನು ಆರೋಗ್ಯ ಮತ್ತು ದೇಹದಾಢ್ಯದ ದೃಷ್ಟಿಯಲ್ಲಿ ಬಳಸುವುದಕ್ಕಿಂತ, ಮೌಢ್ಯ ಆಚರಣೆಗೆ ಹೆಚ್ಚು ವಿನಿಯೋಗವಾಗುತ್ತಿರುವುದು ಅಘಾತಕಾರಕ ಸಂಗತಿಯಾಗಿದೆ.

  ಕರ್ನಾಟಕದಲ್ಲಿ ಶ್ರವಣ ಬೆಳಗೋಳವು ಐತಿಹಾಸಿಕ ಪ್ರಸಿದ್ಧಿ ಸ್ಥಳ. ಅಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಜೈನಧರ್ಮದ ಆಚರಣೆಯ ಪ್ರತೀಕವಾಗಿರುವ ಈ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ 57 ಅಡಿ ಎತ್ತರದ ಬಾಹುಬಲಿ ಪ್ರತಿಮೆಗೆ ಹಾಲು, ನೀರು, ಅರಿಶಿನ, ಗಂಧ, ಹೂವು, ಎಳನೀರು ಹಾಗೂ ಕೇಸರಿ ಇತ್ಯಾದಿಯಾಗಿ 57 ಬಗೆಯ ವಸ್ತುಗಳನ್ನು ಅಭಿಷೇಕಕ್ಕೆ ಉಪಯೋಗಿಸಲಾಗುತ್ತದೆ. ಈ 57 ಅಡಿ ಎತ್ತರವಿರುವ ಬೃಹದಾಕಾರದ ಪ್ರತಿಮೆಗೆ ಅಭಿಷೇಕ ಮಾಡಲು ಸುಮಾರು 1000 ಲೀಟರ್ ಗಿಂತಲೂ ಅಧಿಕವಾಗಿ ಹಾಲನ್ನು ಬಳಸಲಾಗುತ್ತದೆ. ಮೂರು ಸಾವಿರ ಲೀಟರ್ ಗಳಷ್ಟು ನೀರು, 250 ಕೆಜಿ ಅರಿಶಿನವನ್ನು ಸಹಿತ ಬಳಸಲಾಗುತ್ತದೆ.

  ಇವುಗಳನ್ನೆಲ್ಲಾ ಬಳಸಿ ಅಭಿಷೇಕ ಮಾಡುವಾಗ ಶಿಲಾ ಪ್ರತಿಮೆಯ ಬಣ್ಣ ಬದಲಾಗುತ್ತ ಹೋಗುತ್ತದೆ. ಈ ಮಸ್ತಕಾಭಿಷೇಕವನ್ನು ವೀಕ್ಷಿಸಲು ಲಕ್ಷಾಂತರ ಜನರು ಅಲ್ಲಿ ನೆರೆಯುತ್ತಾರೆ. ಬರಿ ಜೈನಧರ್ಮದಲ್ಲಷ್ಟೇ ಇಲ್ಲದೆ, ಹಿಂದೂ ದೇವಾಲಯಗಳಲ್ಲಿಯೂ ಸಹಿತ ದಿನಕ್ಕೆ ಭಾರತದಾಧ್ಯಂತ ಸಾವಿರಾರು ಲೀಟರ್ ಹಾಗೂ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ದೇವರ ಮೂರ್ತಿಗೆ ಅಭಿಷೇಕ ಮಾಡುತ್ತಾರೆ. ಅದರಲ್ಲಿಯೂ ನಾಗರ ಪಂಚಮಿಯ ಸಂದರ್ಭದಲ್ಲಿ ಮಕ್ಕಳಿಗಿಂತ ಹೆಚ್ಚಾಗಿ ಹುತ್ತಕ್ಕೆ ಹಾಲೆರೆಯುವುದುಂಟು, ಈ ರೀತಿಯಲ್ಲಿ ನಾವು ಪೌಷ್ಠಿಕಾಂಶಯುಕ್ತ ಹಾಲನ್ನು ಕಲ್ಲು, ಮಣ್ಣಿಗೆ ಸುರಿದು ನಮ್ಮ ಮಕ್ಕಳನ್ನು ನಾವೇ ಅಪೌಷ್ಠಿಕಾಂಶದಿಂದ ಬಳಲುವಂತೆ ಮಾಡುತ್ತಿದ್ದೇವೆ.

  ಅಪೌಷ್ಠಿಕತೆ ನಮ್ಮ ದೇಶದ ಬಹುದೊಡ್ಡ ಸಮಸ್ಯೆಗಳಲ್ಲೊಂದಾಗಿದೆ. ಅಪೌಷ್ಠಿಕತೆ ಎಂದರೆ ಪೌಷ್ಠಿಕಾಂಶ ಕಡಿಮೆ ಇರುವ ಅಥವಾ ಅಸಮತೋಲನವಾದ ಆಹಾರ ಸೇವನೆಯಿಂದ ದೇಹದಲ್ಲಿ ಉಂಟಾಗುವ ಪೌಷ್ಠಿಕಾಂಶದ ಕೊರತೆ ಎಂದು ಹೇಳಬಹುದು. ಈ ಅಪೌಷ್ಠಿಕತೆಯು, ಮಕ್ಕಳು ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಜಾಗತಿಕ ಹಸಿವು ಸೂಚ್ಯಾಂಕ 2017ರ ವರದಿಯ ಪ್ರಕಾರ 118 ದೇಶಗಳ ಪೈಕಿ ಭಾರತ 97ನೇ ಸ್ಥಾನದಲ್ಲಿದೆ. ಇದರ ಪರಿಣಾಮ ಮಕ್ಕಳ ಪರಿಸ್ಥಿತಿ ಈ ಕೆಳಕಂಡಂತಿದೆ.

  ಪ್ರತಿವರ್ಷ ಹಸಿವು ಮತ್ತು ಅಪೌಷ್ಠಿಕತೆಯಿಂದ ಸಾವಿರಾರು ಮಕ್ಕಳು ಮತ್ತು ಮಹಿಳೆಯರು ತೊಂದರೆಗೆ ಒಳಗಾಗುತ್ತಿದ್ದಾರೆ. ಅದರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಶೇ, 38ರಷ್ಟು ಕಡಿಮೆ ತೂಕ, ಕಡಿಮೆ ಎತ್ತರ ಹೊಂದಿದ್ದಾರೆ.

  ಶೇ. 21 ರಷ್ಟು ಮಕ್ಕಳು ತಮ್ಮ ಎತ್ತರಕ್ಕೆ ಅನುಗುಣವಾಗಿ ತೂಕ ಪಡೆಯುವುದರಲ್ಲಿ ವಿಫಲರಾಗಿದ್ದಾರೆ.

  ಶೇ. 36 ರಷ್ಟು ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ತೂಕವನ್ನು ಹೊಂದಿಲ್ಲ.

  ಶೇ. 58 ರಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ.

  ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂ ಹೆಚ್ ಒ) ಪ್ರಕಾರ, ಪ್ರಸ್ತುತ ಮಕ್ಕಳ ಮರಣ ಪ್ರಮಾಣದ ಅರ್ಧದಷ್ಟು ಪ್ರಕರಣಗಳಲ್ಲಿ ಅಪೌಷ್ಠಿಕತೆ ಪ್ರಮುಖ ಕಾರಣವಾಗಿದೆ.

  ವಿಶ್ವದಾಧ್ಯಂತ ಹನ್ನೆರಡು ಜನರಲ್ಲಿ ಒಬ್ಬರು ಪೌಷ್ಠಿಕತೆಯ ಕೊರತೆ ಹೊಂದಿರುವವರಾಗಿರುತ್ತಾರೆ.

  36 ದಶಲಕ್ಷಗಳಿಗಿಂತ ಹೆಚ್ಚಿನ ಜನರು ಹಸಿವಿನಿಂದ ಮತ್ತು ಸೂಕ್ಷ್ಮ ಪೌಷ್ಠಿಕ ದ್ರವ್ಯಗಳಲ್ಲಿನ ಕೊರತೆಯಿಂದ ಉಂಟಾಗುವ ಖಾಯಿಲೆಗಳಿಂದಾಗಿ ಮರಣ ಹೊಂದುತ್ತಿದ್ದಾರೆ.

  ಹಸಿವು ಮತ್ತು ಅಪೌಷ್ಠಿಕತೆಯಿಂದ ಇಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತಿದ್ದರು. ಇದರ ನಿರ್ಮೂಲನೆಗೆ, ಸರ್ಕಾರವಾಗಲಿ ಅಥವಾ ಜನಸಾಮಾನ್ಯರೇ ಆಗಲಿ ಎಚ್ಚರ ವಹಿಸದೇ ಇರುವುದು ಮಾನವ ಸಂಪನ್ಮೂಲಕ್ಕೆ ಬಗೆದ ಮಹಾನ್ ದ್ರೋಹ.

  ಮಹಾಮಸ್ತಕಭಾಷೇಕ ಅಥವಾ ಇನ್ನಿತರ ಧಾರ್ಮಿಕ  ಆಚರಣೆಗಳು ಅವರವರ ವೈಯಕ್ತಿಕ. ಆದರೆ ತಮ್ಮ ಆಚರಣೆಯನ್ನು ವಿಜೃಂಭಿಸಲು ಪೌಷ್ಠಿಕಾಂಶದಿಂದ ಕೂಡಿರುವ ಹಾಲನ್ನು ವ್ಯರ್ಥ ಮಾಡುವುದು ಔಚಿತ್ಯವಲ್ಲ. ಹಾಲಿನ ಪ್ರತಿ ಹನಿಯೂ ಉಪಯುಕ್ತವಾದದ್ದು, ಏಕೆಂದರೆ ಹಾಲಿನಿಂದ ನಾನಾ ಬಗೆಯ ಉತ್ಪನ್ನಗಳಾದ ಮೊಸರು, ತುಪ್ಪ, ಬೆಣ್ಣೆ ಮುಂತಾದ ವಸ್ತುಗಳನ್ನು ತಯಾರಿಸುತ್ತಾರೆ. ಮಾರಾಟವಾಗದೆ ಉಳಿದ ಹಾಲನ್ನು ಸಂಸ್ಕರಿಸಿ ಪೌಡರ್ ನ ರೂಪಕ್ಕೆ ತಂದು ಉಪಯೋಗಿಸುವುದುಂಟು. ಹೀಗೆ ನಾನಾ ಬಗೆಯಲ್ಲಿ ಮನುಷ್ಯ ಸೇವಿಸುತ್ತಾನೆ. ಆದರೆ ಸ್ವತಹ ನಾವೇ ಅದನ್ನು ಸೇವಿಸುವುದಕ್ಕಿಂತ ಹೆಚ್ಚಾಗಿ ವಿಗ್ರಹಾರಾಧನೆಗಳಿಗೆ ಬಳಸುತ್ತಿದ್ದೇವೆ.

  ಇಂದು ನಮ್ಮ ಪ್ರಸ್ತುತ ಕಾಲಮಾನದಲ್ಲಿ ಅನಾಥಾಶ್ರಮಗಳು, ಬೀದಿಯಲ್ಲಿ ಚಿಂದಿ ಆಯುವ ಮಕ್ಕಳು, ಗ್ರಾಮಿಣ ಮಕ್ಕಳು, ನಗರದಲ್ಲಿನ ಸ್ಲಂ ನಲ್ಲಿ ವಾಸಿ ಮಾಡುವ ಮಕ್ಕಳಲ್ಲದೆ, ಶ್ರೀಮಂತರ ಮನೆಗಳಲ್ಲಿಯೂ ಕೂಡ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದುಂಟು. ಏಕೆಂದರೆ ಹಾಲಿನ ಮಹತ್ವವನ್ನು ತಿಳಿದುಕೊಳ್ಳದೆ ಇರುವುದರ ಪರಿಣಾಮ, ಜೊತೆಗೆ ಮಕ್ಕಳಿಗಿಂತ ಹೆಚ್ಚು ವಿಗ್ರಹಗಳಿಗೆ ಪ್ರಾಮುಖ್ಯತೆ ಕೊಡುತ್ತಿರುವುದರಿಂದ, ಹಾಲನ್ನು ವೈಜ್ಞಾನಿಕವಾಗಿ ನೋಡುವುದಕ್ಕಿಂತ ಮೌಢ್ಯದಲ್ಲಿ ನೊಡುವಂತಾಗಿರುವ ಪರಿಣಾಮದಿಂದ ಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲಿಯೇ ಖಾಯಿಲೆಗೆ ತುತ್ತಾಗುತಿದ್ದಾರೆ.

  ಈ ಆಚರಣೆಗಳಿಂದಾಚೆಗೂ ಹಾಲನ್ನು ಅಗತ್ಯವಿರುವ ಜನರಿಗೆ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಹಸಿವು ಮುಕ್ತ ಭಾರತ ಪ್ರಗತಿಗೆ ಎಲ್ಲರೂ ಪಾಲ್ಗೊಳ್ಳುವ ತುರ್ತು ಈ ಕಾಲದ್ದಾಗಬೇಕಿದೆ. ಇಲ್ಲವಾದರೆ ನಮ್ಮ ಮಕ್ಕಳ ಅಪೌಷ್ಠಿಕತೆಗೆ, ನಾವೇ ಕಾರಣರಾಗಿಬಿಡುತ್ತೇವೆ.

  -ರೂಪ ಎಂ.ಹಾರೋಹಳ್ಳಿ

  NO COMMENTS

  LEAVE A REPLY