ರಾಜ್ಯ ಹಸಿವು ಮುಕ್ತ ಆಗಿದೆ, ಕಾವೇರಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಿಲ್ಲ: ಸಿಎಂ

ರಾಜ್ಯ ಹಸಿವು ಮುಕ್ತ ಆಗಿದೆ, ಕಾವೇರಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಿಲ್ಲ: ಸಿಎಂ

134
0
SHARE

ಬೆಂಗಳೂರು: ಕರ್ನಾಟಕವನ್ನು ಹಸಿವು ಮುಕ್ತರಾಜ್ಯ ಮಾಡುವುದು ನಮ್ಮ ಕನಸಾಗಿತ್ತು. ಅನ್ನಭಾಗ್ಯ ಯೋಜನೆ ಮೂಲಕ ಅದನ್ನು ಸಾಕಾರ ಮಾಡುತ್ತಿದ್ದೇವೆ. ಶಾಲಾ ಮಕ್ಕಳಿಗೆ ಹಾಲು, ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ನಿಂದ ರಾಜ್ಯ ಹಸಿವು ಮುಕ್ತ ಆಗಿದೆ. ಇದಕ್ಕಿಂತ ತೃಪ್ತಿ ಬೇರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನ ಮಂಡಲದ ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದರು. ಹಸಿದು ಬಂದವರಿಗೆ ಅನ್ನ, ಹಾಲು, ಬೆಣ್ಣೆ ನೀಡಬೇಕು ಎಂದು ಸರ್ವಜ್ಞರೇ ಹೇಳಿಲ್ಲವೇ , ಇದು ನಮ್ಮ ಸರಕಾರದ ಕೊಡುಗೆ ಎಂದು ಹೇಳುವುದಿಲ್ಲ. ಇದು ಒಂದು ದೊಡ್ಡ ಜನಸೇವೆ ಎಂದರು.ಕಾವೇರಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಿಲ್ಲ

ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧದ ತೀರ್ಪಿನಲ್ಲಿ ಬೆಂಗಳೂರಿಗೂ ನೀರು ಸಿಕ್ಕಿದೆ. ನಾನು ಆ ತೀರ್ಪು ಸ್ವಾಗತ ಮಾಡಿ ವಾದ ಮಂಡಿಸಿದ ನಮ್ಮ ವಕೀಲರನ್ನು ಅಭಿನಂದಿಸುತ್ತೇನೆ. ಮಹದಾಯಿ ವಿಚಾರದಲ್ಲೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಮಹದಾಯಿ ವಿಷಯದಲ್ಲಿ ಕೊಂಚ ರಾಜಕೀಯ ಆಗಿರಬಹುದು. ಆದರೆ ಕಾವೇರಿ ವಿಚಾರದಲ್ಲಿ ಪ್ರತಿ ಪಕ್ಷಗಳೂ ಸೇರಿ ಯಾರೂ ರಾಜಕೀಯ ಮಾಡಲಿಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಸರಕಾರ ಕಳೆದ ಐದು ವರ್ಷದಲ್ಲಿ ನುಡಿದಂತೆ ನಡೆದಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಜನರಿಗೂ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂಬುದು ಮನವರಿಕೆ ಆಗಿದೆ. ಹೀಗಾಗಿ ಆಡಳಿತ ವಿರೋಧಿ ಅಲೆ ಇಲ್ಲ. ಜನರು ಸರಕಾರದ ಬಗ್ಗೆ ಸಮಾಧಾನದಿಂದ ಇದ್ದಾರೆ. ಅವರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಇದರ ಆಧಾರದ ಮೇಲೆ ಮತ್ತೆ ಅಧಿಕಾರಕ್ಕೆ ಬರುವ ಮಾತು ಹೇಳುತ್ತಿದ್ದೇನೆಯೇ ಹೊರತು ಭ್ರಮೆ ಅಲ್ಲ ಎಂದರುವಸ್ತುಸ್ಥಿತಿ ಆಧಾರದ ಮೇಲೆ ಕನಸುಗಳನ್ನು ಕಟ್ಟಬೇಕು. ಅದನ್ನು ನನಸಾಗಿಸಲು ಪ್ರಯತ್ನ ಮಾಡಬೇಕು. ಅದನ್ನು ನಾವು ಐದು ವರ್ಷದಲ್ಲಿ ಮಾಡಿದ್ದೇವೆ. 1.8 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಸಿಗುತ್ತಿದೆ. ಇನ್ನೂ 15 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ನೀಡಲಿದ್ದೇವೆ. ಬಡವರಿಗಾಗಿ ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ‌. 30 ಲಕ್ಷ ಕುಟುಂಬಗಳಿಗೆ ಇದರಿಂದ ಅನುಕೂಲ ಆಗಲಿದೆ. ನಮ್ಮ ಅಮ್ಮ ಹಸಿ ಸೌದೆಯಲ್ಲಿ‌ ಅಡುಗೆ ಮಾಡುವಾಗ ಹೊಗೆ ಬಂದು ಕಣ್ಣೀರು ಹಾಕುತ್ತಿದ್ದರು. ಆ ಕಷ್ಟದ ಅರಿವಾಗಿಯೇ ಅನಿಲ ಭಾಗ್ಯ ಯೋಜನೆಯಲ್ಲಿ ಸ್ಟವ್, ಅನಿಲದ ಸಿಲಿಂಡರ್ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೃಷಿ ಉತ್ಪನ್ನಗ ಳಿಗೆ ಸೂಕ್ತ ದರ ಒದಗಿಸಲು ಎಪಿಎಂಸಿಗಳಲ್ಲಿ ಏಕರೂಪ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಇದು ಕೇಂದ್ರದ ನೀತಿ ಆಯೋಗದಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಇದು ದೇಶದಲ್ಲೇ ಪ್ರಥಮ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸರಕಾರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತದೆ. ಹೀಗಾಗಿ ಸಾವಿಗೆ ಶರಣಾಗಬೇಡಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ರೈತರ ಕುಟುಂಬದವರಿಗೆ ನೀಡುವ ಪರಿಹಾರ ಐದು ಲಕ್ಷಕ್ಕೆ ಹೆಚ್ಚಿಸಿ ಮಾಸಿಕ ಪಿಂಚಣಿಯಾಗಿ ಎರಡು ಸಾವಿರ ನೀಡುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣ, ಕುಟುಂಬದವರಿಗೆ ಆರೋಗ್ಯ ಸೌಲಭ್ಯ ನೀಡುತ್ತಿದ್ದೇವೆ. ಕೃಷಿ ಭಾಗ್ಯ ಯೋಜನೆಯಲ್ಲಿ 1.92 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ್ದೇವೆ. 1920 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಿದ್ದೇವೆ. ಇದು ಅತ್ಯಂತ ಜನಪ್ರಿಯ ಯೋಜನೆ ಆಗಿದೆ.

70 ಲಕ್ಷ ರೈತರಿಗಾಗಿ ರೈತ ಬೆಳಕು ಯೋಜನೆ ಜಾರಿಗೆ ತರುತ್ತಿದ್ದೇವೆ. ಒಣಭೂಮಿ ಬೇಸಾಯ ಮಾಡುವವರಿಗೆ ಇದರಿಂದ ಅನುಕೂಲ ಆಗಲಿದೆ. ಇದರ ವಾರ್ಷಿಕ ವೆಚ್ಚ ಮೂರೂವರೆ ಸಾವಿರ ಕೋಟಿ ಎಂದು ವಿವರಿಸಿದರು.

ಕೆರೆಗಳನ್ನು ತುಂಬಿಸುತ್ತಿದ್ದೇವೆ. 2,600 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲು ಸುಮಾರು ಎಂಟು ಸಾವಿರ ಕೋಟಿ ವೆಚ್ಚ ಮಾಡಿದ್ದೇವೆ. ಕೆರೆಗಳನ್ನು ತುಂಬಿಸಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ. ಕೋಲಾರ ಮತ್ತಿತರ ಜಿಲ್ಲೆಗಳಿಗೆ ಸಂಸ್ಕರಿಸಿದ ನೀರು ಕೊಡಲಿದ್ದೇವೆ. ಇದು ಕುಡಿಯುವ ಉದ್ದೇಶಕ್ಕೆ ಅಲ್ಲ. ಕೆರೆಗಳನ್ನು ತುಂಬಿಸಲು ಮಾತ್ರ.ಇದು 2450 ಕೋಟಿ ರೂ. ವೆಚ್ಚದ ಯೋಜನೆ. 13 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನ ಹೊಳೆ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಬಯಲು ಸೀಮೆ ಜಿಲ್ಲೆಗಳಲ್ಲಿ ಕೆರೆಗಳು ತುಂಬಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

ಸಾಲ ಶೇ. 25 ಮೀರಬಾರದು ಎಂದಿದೆ. ಆದರೆ ಶೇ.19ಕ್ಕಿಂತ ಕಡಿಮೆ ಇದೆ. ದಿವಾಳಿ ಆಗಲು ಹೇಗೆ ಸಾಧ್ಯ. ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೇ ರಾಜ್ಯದ ಹಣಕಾಸು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

NO COMMENTS

LEAVE A REPLY