ಕುಲಪತಿಗಳ ನೇಮಕ: ಸರಕಾರ ನಿಯಂತ್ರಣ ಸಾಧಿಸಲು ಅವಕಾಶ

ಕುಲಪತಿಗಳ ನೇಮಕ: ಸರಕಾರ ನಿಯಂತ್ರಣ ಸಾಧಿಸಲು ಅವಕಾಶ

249
0
SHARE

ಬೆಂಗಳೂರು( ಫೆ.22.2018):ಹಲವಾರು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ನೇಮಕಾತಿಯೇ ನಡೆದಿಲ್ಲ. ಕಳೆದ ಒಂದು ವರ್ಷಗಳಿಂದ ಅನೇಕ ವಿಶ್ವವಿದ್ಯಾಲಯಗಳು ಕುಲಪತಿಗಳಿಲ್ಲದೆಯೇ ಕಾರ್ಯನಿರ್ವಹಿಸುತ್ತಿದೆ.

ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಸುಧಾರಣೆ ಹಾಗೂ ಕುಲಪತಿಗಳ ನೇಮಕ ಪ್ರಕ್ರಿಯೆಯಲ್ಲಿ ಸರಕಾರ ಹಿಡಿತ ಸಾಧಿಸಲು ಸಹಾಯಕವಾಗುವ 1976 ರ ಕರ್ನಾಟಕ ವಿಶ್ವವಿದ್ಯಾನಿಲಯಗಳ ಕಾಯಿದೆ ತಿದ್ದುಪಡಿ ಮಸೂದೆ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕ-2017’ ನ್ನು ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾಯಿತು.

 

ಈ ಹಿಂದೆಯೇ ಈ ವಿಧೇಯಕ ವಿಧಾನಸಭೆಯಲ್ಲಿ ಅನುಮೋದನೆಗೊಂಡಿತ್ತು. ಪರಿಷತ್‌ನಲ್ಲಿ ಆಕ್ಷೇಪ ಬಂದದ್ದರಿಂದ ಪರಾಮರ್ಶೆ ಕೈಗೊಳ್ಳಲು ಸದನ ಸಮಿತಿ ರಚಿಸಲಾಗಿತ್ತು. ಇದೀಗ ಸದನ ಸಮಿತಿ ವರದಿಯನ್ನು ಮಂಡಿಸಿ ಉದ್ದೇಶಿತ ವಿಧೇಯಕವನ್ನು ಪರಿಷತ್‌ನಲ್ಲಿ ಪಾಸು ಮಾಡಲಾಗಿದೆ.ವಿವಿಗಳಲ್ಲಿನ ಶೈಕ್ಷಣಿಕ ಚಟುವಟಿಕೆ ಉತ್ತಮಗೊಳ್ಳಬೇಕು. ವಿವಿ ಆಡಳಿತವೂ ಪಾರದರ್ಶಕವಾಗಬೇಕು ಎಂಬ ದೃಷ್ಟಿಯಿಂದ ಈ ವಿಧೇಯಕ ತರಲಾಗಿದೆ.

ವಿವಿ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಾಗೂ ಯಾರದೇ ಅಧಿಕಾರ ಮೊಟಕುಗೊಳಿಸುವ ಉದ್ದೇಶ ಸರಕಾರಕ್ಕೆ ಇಲ್ಲವೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ. ಸದ್ಯಕ್ಕೆ ವಿವಿಗಳಿಗೆ ಸಂಬಂಧಿಸಿ 7 ಕಾಯಿದೆಗಳಿದ್ದು, ಒಂದೇ ಕಾಯಿದೆ ಬರುವುದರಿಂದ ಅನುಕೂಲವಾಗಲಿದೆ. ಕುಲಪತಿಗಳ ನೇಮಕದಲ್ಲಿನ ವಿಳಂಬವೂ ತಪ್ಪಲಿದೆ ಎಂದು ಸಚಿವರು ಹೇಳಿದ್ದಾರೆ.

ಕುಲಪತಿಗಳ ನೇಮಕ ಸಂಬಂಧ ರಾಜ್ಯಪಾಲರಿಗೆ ಹೆಸರು ಶಿಫಾರಸು ಮಾಡಿದಾಗ ಅದನ್ನು ಒಂದು ಬಾರಿ ಅವರು ವಾಪಸ್‌ ಕಳುಹಿಸಬಹುದು. ಆದರೆ, ಸಕಾರಣವಿರಬೇಕು. ಎರಡನೇ ಬಾರಿಗೆ ಶಿಫಾರಸು ಮಾಡಿದಾಗ 30 ದಿನದೊಳಗೆ ಅಂಕಿತ ಹಾಕಲೇಬೇಕು ಎಂಬ ಅಂಶವನ್ನು ಈ ವಿಧೇಯಕದಲ್ಲಿ ಸೇರಿಸಲಾಗಿದೆ. ಹಾಗಾಗಿ ಕುಲಪತಿ ನೇಮಕ ವಿಚಾರದಲ್ಲಿ ಸರಕಾರ ನಿಯಂತ್ರಣ ಸಾಧಿಸಲು ಇದು ಅವಕಾಶ ಮಾಡಿಕೊಡಲಿದೆ.

ಕುಲಪತಿಯಾಗಲು 25 ವರ್ಷಗಳ ಶೈಕ್ಷಣಿಕ ಅನುಭವ ಹೊಂದಿರಬೇಕು. ಈ ಪೈಕಿ 10 ವರ್ಷ ಪ್ರೊಫೆಸರ್‌ ಆಗಿ ಕಾರ್ಯ ನಿರ್ವಹಿಸಿರಬೇಕು. ಕುಲಸಚಿವರ ಹುದ್ದೆಯ ಗರಿಷ್ಠ ಅವಧಿ 3 ವರ್ಷಕ್ಕೆ ಮೊಟಕುಗೊಳಿಸುವುದು ಹಾಗೂ ಮೌಲ್ಯಮಾಪನ ಕುಲಸಚಿವ ಹುದ್ದೆ ತೆಗೆದು ಆ ಜಾಗದಲ್ಲಿ ಪರೀಕ್ಷಾ ನಿಯಂತ್ರಕರ ನೇಮಕಮಾಡುವುದು ಮಸೂಧೆಯಲ್ಲಿರುವ ಪ್ರಮುಖ ಅಂಶಗಳಾಗಿವೆ.

NO COMMENTS

LEAVE A REPLY