ಪಾಂಡೆ, ಧೋನಿ ಬಿರುಸಿನ ಫಿಫ್ಟಿ; ಭಾರತ 188/4

ಪಾಂಡೆ, ಧೋನಿ ಬಿರುಸಿನ ಫಿಫ್ಟಿ; ಭಾರತ 188/4

220
0
SHARE

ಭಾರತ Vs ದಕ್ಷಿಣ ಆಫ್ರಿಕಾ 2ನೇ ಟ್ವೆಂಟಿ-20 ಲೈವ್ ಸ್ಕೋರ್ 

ಸೆಂಚುರಿಯನ್: ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸ್ಪಟ್ಟಿರುವ ಟೀಮ್ ಇಂಡಿಯಾ ಕನ್ನಡಿಗ ಮನೀಷ್ ಪಾಂಡೆ (79*) ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (52*) ಬಾರಿಸಿರುವ ಬಿರುಸಿನ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 188 ರನ್‌ಗಳ ಗೌರವಾರ್ಹ ಮೊತ್ತ ಪೇರಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಖಾತೆ ತೆರೆಯುವ ಮುನ್ನವೇ ರೋಹಿತ್ ಶರ್ಮಾ ಪೆವಿಲಿಯನ್ ಸೇರಿಕೊಂಡಿದ್ದರು.

ಎರಡನೇ ವಿಕೆಟ್‌ಗೆ ಸುರೇಶ್ ರೈನಾ ಜತೆ ಸೇರಿದ ಶಿಖರ್ ಧವನ್ 43 ರನ್‌ಗಳ ಜತೆಯಾಟ ನೀಡಿದರೂ ಹೆಚ್ಚು ಹೊತ್ತು ಸಾಗಲಿಲ್ಲ. 14 ಎಸೆತಗಳನ್ನು ಎದುರಿಸಿದ ಧವನ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 24 ರನ್ ಗಳಿಸಿದರು.

ಇದರ ಬೆನ್ನಲ್ಲೇ ಇನ್ ಫಾರ್ಮ್ ಬ್ಯಾಟ್ಸ್‌ಮನ್ ನಾಯಕ ವಿರಾಟ್ ಕೊಹ್ಲಿ (1) ವಿಕೆಟ್ ಭಾರತಕ್ಕೆ ನಷ್ಟವಾಯಿತು. ಇದರೊಂದಿಗೆ 45 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಇನ್ನೊಂದೆಡೆ ಸುರೇಶ್ ರೈನಾ ಭರವಸೆಯ ಬ್ಯಾಟಿಂಗ್ ಮುಂದುವರಿಸಿದರು. ಈ ಹಂತದಲ್ಲಿ ಕ್ರೀಸಿಗಿಳಿದ ಕನ್ನಡಿಗ ಮನೀಷ್ ಪಾಂಡೆ ಬಿರುಸಿನ ಆಟಕ್ಕೆ ಒತ್ತು ಕೊಟ್ಟರು.

ರೈನಾಗಿಂತಲೂ ವೇಗವಾಗಿ ಇನ್ನಿಂಗ್ಸ್ ಕಟ್ಟಿದ ಪಾಂಡೆ ಮಂಕಾದ ಭಾರತೀಯ ರನ್ ಗತಿಗೆ ಆವೇಗ ತುಂಬಿದರು. ಇದರಿಂದಾಗಿ ಮೊದಲ 10 ಓವರ್‌ಗಳಲ್ಲಿ 85 ರನ್ ತಲುಪುವಂತಾಗಿತ್ತು.

ಈ ಹಂತದಲ್ಲಿ ಮಳೆ ಸುರಿಯುತ್ತಲೇ ಇತ್ತು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ರೈನಾ ವಿಕೆಟ್ ಭಾರತಕ್ಕೆ ನಷ್ಟವಾಯಿತು. 24 ಎಸೆತಗಳನ್ನು ಎದುರಿಸಿದ ರೈನಾ ಐದು ಬೌಂಡರಿಗಳಿಂದ 30 ರನ್ ಗಳಿಸಿದರು. ಆದರೂ ಪಾಂಡೆ ಜತೆಗೆ 45 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗಿದ್ದರು.

ಕಳೆದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೀಕೆಗೆ ಗುರಿಯಾಗಿದ್ದ ಮನೀಷ್, ಇಲ್ಲಿನ ಕಠಿಣ ಪಿಚ್‌ನಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಅಷ್ಟೇ ಯಾಕೆ 33 ಎಸೆತಗಳಲ್ಲಿ ಅರ್ಧಶತಕದ ಗಡಿಯನ್ನು ದಾಟಿದರು. ಅಂತೆಯೇ 15 ಓವರ್‌ಗಳಲ್ಲಿ ತಂಡದ ಸ್ಕೋರ್ 124/4.

ಅಂತಿಮ ಹಂತದಲ್ಲಿ ಅನುಭವಿ ಮಹೇಂದ್ರ ಸಿಂಗ್ ಧೋನಿ ಜತೆಗೆ ಆಕ್ರಮಣಕಾರಿ ಇನ್ನಿಂಗ್ಸ್ ಬೆಳೆಸಿದ ಪಾಂಡೆ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಅತ್ತ ತಮ್ಮ ಅನುಭವ ಸಂಪತ್ತನ್ನೆಲ್ಲ ಧಾರೆಯೆಳೆದ ಮಹಿ ದ.ಆಫ್ರಿಕಾ ಬೌಲರ್‌ಗಳನ್ನು ನಿದರ್ಯವಾಗಿ ದಂಡಿಸಿದರು. ಇದರಿಂದಾಗಿ ಕೊನೆಯ 10 ಓವರ್‌ಗಳಲ್ಲಿ 103 ರನ್‌ಗಳು ಹರಿದು ಬಂದಿದ್ದವು.

ಇದರೊಂದಿಗೆ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 188 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 48 ಎಸೆತಗಳನ್ನು ಎದುರಿಸಿದ ಪಾಂಡೆ ಆರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ 78 ರನ್ ಗಳಿಸಿ ಅಜೇಯರಾಗುಳಿದರು.

ಹಾಗೆಯೇ 28 ಎಸೆತಗಳನ್ನು ಎದುರಿಸಿದ ಮಹಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ 52 ರನ್ ಗಳಿಸಿ ಔಟಾಗದೆ ಉಳಿದರು. ಅಂತೆಯೇ ಮುರಿಯ ಐದನೇ ವಿಕೆಟ್‌ಗೆ ಕೇವಲ 56 ಎಸೆತಗಳಲ್ಲಿ 98 ರನ್‌ಗಳ ಜತೆಯಾಟವನ್ನು ನೀಡಿದ್ದರು. ದಕ್ಷಿಣ ಆಫ್ರಿಕಾ ಪರ ಜೂನಿಯರ್ ಡಾಲಾ ಎರಡು ವಿಕೆಟುಗಳನ್ನು ಕಬಳಿಸಿದರು.

 

ಟಾಸ್ ಗೆದ್ದ ದ.ಆಫ್ರಿಕಾ ಫೀಲ್ಡಿಂಗ್ ಆಯ್ಕೆ…
ಈ ಮೊದಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಜೆಪಿ ಡ್ಯುಮಿನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಮೊದಲ ಪಂದ್ಯದಲ್ಲಿ 28 ರನ್‌ಗಳ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಇದರಿಂದಾಗಿ ಸರಣಿ ಜೀವಂತವಾಗಿರಿಸಲು ಹರಿಣಗಳ ತಂಡವು ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.

ಮಳೆಯ ಭೀತಿ, ಬುಮ್ರಾ ಔಟ್, ಶಾರ್ದುಲ್ ಇನ್…
ದ್ವಿತೀಯ ಪಂದ್ಯಕ್ಕೆ ಮಳೆಯ ಭೀತಿ ಕಾಡುತ್ತಿದೆ. ಹೊಟ್ಟೆ ನೋವಿಗೊಳಗಾಗಿರುವ ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಶಾರ್ದುಲ್ ಠಾಕೂರ್ ಆಯ್ಕೆಯಾಗಿದ್ದಾರೆ. ಅತ್ತ ಸೋಲಿನ ಹೊರತಾಗಿಯೂ ಆತಿಥೇಯ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಾಗಲಿಲ್ಲ.

NO COMMENTS

LEAVE A REPLY