ಹೆಣ್ಣು ಭ್ರೂಣ ಹತ್ಯೆ: ರಾಜ್ಯದಲ್ಲಿ ಲಿಂಗಾನುಪಾತ ಕುಸಿತ..

ಹೆಣ್ಣು ಭ್ರೂಣ ಹತ್ಯೆ: ರಾಜ್ಯದಲ್ಲಿ ಲಿಂಗಾನುಪಾತ ಕುಸಿತ..

227
0
SHARE

ಬೆಂಗಳೂರು(ಫೆ.18.2018): ಶಿಕ್ಷಣ ಹಾಗೂ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾತ್ರ ಕಡಿಮೆಯಾಗಿಲ್ಲ. ಕೇಂದ್ರ ನೀತಿ ಆಯೋಗ ಬಿಡುಗಡೆ ಮಾಡಿರುವ ರಾಜ್ಯವಾರು ಆರೋಗ್ಯ ಸೂಚ್ಯಂಕ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಪ್ರತಿ 1 ಸಾವಿರ ಪುರುಷರಿಗೆ ಮಹಿಳೆಯರ ಪ್ರಮಾಣ 930ಕ್ಕೆ ಕುಸಿತವಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಆಯೋಗ ಎಚ್ಚರಿಸಿದೆ. 2014-15ರಲ್ಲಿ ರಾಜ್ಯದಲ್ಲಿ ಲಿಂಗಾನುಪಾತ ಪ್ರತಿ ಸಾವಿರ ಪುರುಷರಿಗೆ 950 ಹೆಣ್ಣು ಮಕ್ಕಳಿದ್ದರು. 2015-16ರ ವೇಳೆಗೆ ಹೆಣ್ಣು ಮಕ್ಕಳ ಸಂಖ್ಯೆ930ಕ್ಕೆ ಕುಸಿದಿರುವುದು ವರದಿಯಲ್ಲಿ ಬಹಿರಂಗವಾಗಿದೆ. ಛತ್ತೀಸ್​ಗಡ, ಹಿಮಾಚಲ ಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರಾಖಂಡ್ ಹಾಗೂ ಹರಿಯಾಣದಲ್ಲೂ ಲಿಂಗಾನುಪಾತದಲ್ಲಿ ವ್ಯತ್ಯಯವಾಗಿದ್ದು, ಕಾಯ್ದೆ ಕಟ್ಟುನಿಟ್ಟಿನ ಅನುಷ್ಠಾನ ಮಾಡುವ ಅಗತ್ಯವನ್ನು ಆಯೋಗ ತಿಳಿಸಿದೆ.

ರಾಜ್ಯದಲ್ಲಿ ಕೆಲ ಖಾಸಗಿ ಪ್ರಯೋಗಾಲಯಗಳು ಹಾಗೂ ಆಸ್ಪತ್ರೆಗಳಲ್ಲಿ ಲಿಂಗ ಪತ್ತೆ ಕಾರ್ಯ ಈಗಲೂ ನಡೆಯುತ್ತಿದ್ದು, ಹೆಣ್ಣು ಬೇಡವೆಂಬ ಭಾವನೆ ಇನ್ನೂ ಜನರಲ್ಲಿ ಜೀವಂತವಾಗಿದೆ. ಶುಶ್ರೂಷಕರ ಸಹಾಯದಿಂದ ಪ್ರಸವಪೂರ್ವದಲ್ಲೇ ಲಿಂಗ ಪತ್ತೆ ಹಚ್ಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ನೀತಿ ಆಯೋಗದ ವರದಿ ಇಂತಹ ಆರೋಪಗಳಿಗೆ ಪುಷ್ಟಿ ನೀಡುವಂತಿದೆ.

NO COMMENTS

LEAVE A REPLY