ಕಾವೇರಿ ಹೋರಾಟದಲ್ಲಿ ಮೊದಲ ಬಾರಿಗೆ ನಿಟ್ಟುಸಿರು ಬಿಟ್ಟ ಕರ್ನಾಟಕ..

ಕಾವೇರಿ ಹೋರಾಟದಲ್ಲಿ ಮೊದಲ ಬಾರಿಗೆ ನಿಟ್ಟುಸಿರು ಬಿಟ್ಟ ಕರ್ನಾಟಕ..

228
0
SHARE

ಬೆಂಗಳೂರು(ಫೆ‌.17.2018) : ಕನ್ನಡ ನಾಡಿನ ಜೀವನದಿ ಕಾವೇರಿಗಾಗಿ ನೂರು ವರ್ಷಗಳಿಂದ ನಡೆಸುತ್ತಿರುವ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ನ್ಯಾಯಾಧಿಕರಣದ ಆಘಾತಕಾರಿ ಐ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿದ ಹನ್ನೊಂದು ವರ್ಷಗಳಷ್ಟುಸುದೀರ್ಘ ಹೋರಾಟ ಕೊನೆಗೂ ಕನ್ನಡಿಗರ ಕೈ ಹಿಡಿದಿದೆ. ಅಂತಿಮ ತೀರ್ಪು ಕನ್ನಡಿಗರ ಆಶಯದ ಪರವಾಗಿಯೇ ಬಂದಿದೆ. ಜತೆಗೆ, ಕಾವೇರಿ ಕೊಳ್ಳ ಮಾತ್ರವಲ್ಲದೆ ಅದರ ಆಚೆಗಿದ್ದ ಬೆಂಗಳೂರಿನ ಜನರಿಗೂ ಕಾವೇರಿ ನೀರಿನಲ್ಲಿ ಕುಡಿಯುವ ನೀರಿನ ಪಾಲು ಪಡೆಯುವಲ್ಲಿ ಈ ತೀರ್ಪಿನ ಮೂಲಕ ರಾಜ್ಯ ಯಶಸ್ವಿಯಾಗಿದೆ.

ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮವಿಯ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಕೋರ್ಟ್‌ ನಂ.1 ರಲ್ಲಿ ಸರಿಯಾಗಿ 10.30ಕ್ಕೆ ಆಗಮಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅಂತಿಮ ತೀರ್ಪಿನ ಉಪಸಂಹಾರ ಭಾಗವನ್ನು ಓದಲಾರಂಭಿಸಿದಾಗ ಮತ್ತೊಂದು ಮರಣಶಾಸನದ ಆತಂಕ ರಾಜ್ಯವನ್ನು ಕಾಡುತ್ತಿತ್ತು. ಆದರೆ, 15 ನಿಮಿಷದಲ್ಲಿ ಪ್ರಕಟಿಸಿದ ಈ ತೀರ್ಪು ಎಲ್ಲರಲ್ಲೂ ಸಂಭ್ರಮ ಮೂಡಿಸಿತು. ತಮಿಳುನಾಡಿಗೆ ಹರಿಸಬೇಕಿದ್ದ ನೀರಿನಲ್ಲಿ 14.75 ಟಿಎಂಸಿಯಷ್ಟುಹೊರೆಯನ್ನು ರಾಜ್ಯದ ಹೆಗಲಿಂದ ಇಳಿಸಿತು. ಜತೆಗೆ, ರಾಜ್ಯದ ಕಾವೇರಿ ಕೊಳ್ಳದಲ್ಲಿ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೂ ಇದ್ದ ಅಡ್ಡಿ, ಆತಂಕವನ್ನು ಈ ತೀರ್ಪು ನಿವಾರಿಸಿತು.

456 ಪುಟಗಳ ತೀರ್ಪು:

ನ್ಯಾ. ಮಿಶ್ರಾ ಜೊತೆ ನ್ಯಾ. ಅಮಿತಾವ್‌ ರಾಯ… ಮತ್ತು ನ್ಯಾ. ಎ. ಎಂ. ಖನ್ವೀಳ್ಕರ್‌ ಅವರು ವಿಚಾರಣೆ ನಡೆಸಿ ಪ್ರಕಟಿಸಿದ 465 ಪುಟಗಳಷ್ಟುಈ ಸುದೀರ್ಘ ತೀರ್ಪಿನ ಮೂಲಕ 2007ರಲ್ಲಿ ನ್ಯಾ. ಎನ್‌.ಪಿ.ಸಿಂಗ್‌ ನೇತೃತ್ವದ ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಗಳು ಸಲ್ಲಿಸಿದ್ದ ಸಿವಿಲ… ಮೇಲ್ಮನವಿಗಳು ಇತ್ಯರ್ಥಗೊಂಡಿವೆ. ಕರ್ನಾಟಕದ ಸಿವಿಲ… ಅರ್ಜಿಯನ್ನು ಮಾತ್ರ ಭಾಗಶಃ ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ಉಳಿದ ರಾಜ್ಯಗಳ ಅರ್ಜಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಮುಂದುವರಿಸದಿರಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಇದರ ಜತೆಗೆ, ಸಂಕಷ್ಟಸೂತ್ರದಡಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಅನೇಕ ಅರ್ಜಿಗಳೂ ಈ ತೀರ್ಪಿನೊಂದಿಗೆ ಮಾನ್ಯತೆ ಕಳೆದುಕೊಂಡಿವೆ. ಆದರೆ ಕರ್ನಾಟಕ ಬೆಳೆ ಪರಿಹಾರ ನೀಡಬೇಕು ಮತ್ತು ಕಾವೇರಿಗೆ ಕೊಳಚೆ ನೀರು ಬಿಡುತ್ತಿದೆ ಎಂಬ ತಮಿಳುನಾಡಿನ ಅರ್ಜಿಗಳು ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ.

ಅಂತರ್ಜಲ ಪರಿಗಣಿಸಿತು:

ಕಾವೇರಿ ನ್ಯಾಯಾಧಿಕರಣವು 2007ರಲ್ಲಿ ತಮಿಳುನಾಡಿನ ಕಾವೇರಿ ಕೊಳ್ಳದಲ್ಲಿನ 20 ಟಿಎಂಸಿ ಅಂತರ್ಜಲವನ್ನು ಹೊರಗಿಟ್ಟು 419 ಟಿಎಂಸಿ ನೀರನ್ನು ಆ ರಾಜ್ಯಕ್ಕೆ ನೀಡಿತ್ತು. ಆದರೆ ಕರ್ನಾಟಕದ ಅಂತರ್ಜಲವನ್ನು ಮಾತ್ರ ಲೆಕ್ಕ ಹಾಕಿತ್ತು. ಆದರೆ ಈ ತಾರತಮ್ಯವನ್ನು ಸರಿಪಡಿಸಿದ ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ ಅಲ್ಲಿನ ಅಂತರ್ಜಲವನ್ನು ಪರಿಗಣಿಸದೆ ಹೆಚ್ಚುವರಿಯಾಗಿ ನೀಡಿದ್ದ 20 ಟಿಎಂಸಿ ನೀರಿನಲ್ಲಿ 10 ಟಿಎಂಸಿಯಷ್ಟನ್ನು ಕಡಿತ ಮಾಡಿ ಅದನ್ನು ರಾಜ್ಯಕ್ಕೆ ನೀಡಿದೆ.

ಜತೆಗೆ, ನ್ಯಾಯಾಧಿಕರಣವು ಬೆಂಗಳೂರಿನ ಮೂರನೇ ಒಂದು ಭಾಗವನ್ನು ಮಾತ್ರ ಕಾವೇರಿ ಕೊಳ್ಳದ ವ್ಯಾಪ್ತಿಗೆ ಒಳಪಡಿಸಿ ಕೇವಲ 1.75 ಟಿಎಂಸಿ ನೀರನ್ನು ನೀಡಿತ್ತು. ಆದರೆ ಬೆಂಗಳೂರನ್ನು ಜಾಗತಿಕ ನಗರವೆಂದು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌ ಒಟ್ಟು 6.5 ಟಿಎಂಸಿ ಕುಡಿಯುವ ನೀರನ್ನು ಬೆಂಗಳೂರಿಗೆ ನೀಡಿದೆ. ಈ ಮೂಲಕ ಕಾವೇರಿಯಲ್ಲಿ ಕರ್ನಾಟಕದ ಪಾಲು 284.5 ಟಿಎಂಸಿಗೆ ಏರಿದರೆ ತಮಿಳುನಾಡಿನ ಪಾಲು 404.5 ಟಿಎಂಸಿಗೆ ಇಳಿದಿದೆ. ನ್ಯಾಯಾಧಿಕರಣವು ಕೇರಳಕ್ಕೆ ನೀಡಿದ್ದ 30 ಟಿಎಂಸಿ ಮತ್ತು ಪಾಂಡಿಚೇರಿಗೆ ನೀಡಿದ್ದ 7 ಟಿಎಂಸಿ ಅಬಾಧಿತವಾಗಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಒಂದು ಕೋಟಿ ಬೆಂಗಳೂರಿಗೆ ನಿರಾಳತೆ ತಂದಿದ್ದಷ್ಟೇ ಅಲ್ಲದೆ, ಕುಡಿಯುವ ನೀರಿನ ಮೂಲ ತತ್ವವನ್ನು ಕಾವೇರಿ ನ್ಯಾಯಾಧಿಕರಣ ಉಲ್ಲಂಘಿಸಿದೆ ಎಂದೂ ಉಲ್ಲೇಖಿಸಿದೆ. ಈ ಮೂಲಕ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದು ಪರೋಕ್ಷವಾಗಿ ಸುಪ್ರೀಂ ಕೋರ್ಟ್‌ ಹೇಳಿರುವುದು ಹಾಗೂ ಅಂತರ್‌ ಕೊಳ್ಳದ ಬೆಂಗಳೂರಿಗೂ ಹೆಚ್ಚುವರಿ ನೀಡಿರುವುದು ಮುಂದೆ ಮಹದಾಯಿ ನ್ಯಾಯಾಧಿಕರಣದಲ್ಲಿ ರಾಜ್ಯದ ನೆರವಿಗೆ ಬರುವಂತಹ ಅಂಶವಾಗಿದೆ.

ಆರು ವಾರದಲ್ಲಿ ಮಂಡಳಿ ರಚನೆ:

ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಕಾವೇರಿ ನಿರ್ವಹಣಾ ಮಂಡಳಿ ಎಂದು ನೇರವಾಗಿ ಹೇಳದಿದ್ದರೂ ಸ್ಕೀಮ್‌ ಎಂಬ ಪದ ಪ್ರಯೋಗ ಮಾಡಿದೆ. ಆದರೆ ನ್ಯಾಯಾಧಿಕರಣದ ಐ ತೀರ್ಪು ಮತ್ತು ಅಂತಾರಾಜ್ಯ ಜಲ ಕಾಯ್ದೆ-1956ರ ನೆಲೆಯಲ್ಲಿ ನ್ಯಾಯಾಧಿಕರಣ ಉಲ್ಲೇಖಿಸಿರುವ ಮಂಡಳಿಯೇ ಇದು ಆಗಿದೆ. ಈ ಮಂಡಳಿಗೆ ಬೇರೆ ಹೆಸರಿಡುವ ಅವಕಾಶ ಕೇಂದ್ರ ಸರ್ಕಾರಕ್ಕೆ ಇದೆ. ಆದರೆ ಆರು ವಾರದಲ್ಲಿ ಇಂತಹ ಸ್ಕೀಮ… ಒಂದನ್ನು ಕೇಂದ್ರ ಸರ್ಕಾರ ರಚಿಸಲೇ ಬೇಕು, ಇದಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಕಾಲವಾಕಾಶ ಕೇಳುವಂತೆಯೂ ಇಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಈ ಸ್ಕೀಮ… ಅಂದರೆ ಮಂಡಳಿ ತನ್ನ ತೀರ್ಪಿನ ಜಾರಿಗೊಳಿಸುವ ಹೊಣೆ ನಿರ್ವಹಿಸಲಿದೆ ಎಂದೂ ಸುಪ್ರೀಂ ತಿಳಿಸಿದೆ.

ನೀರಿನ ತೀವ್ರ ಕೊರತೆ ಇರುವ ಹಿನ್ನೆಲೆಯಲ್ಲಿ ರಾಜ್ಯಗಳು ತಮಗೆ ನಿಗದಿ ಪಡಿಸಿರುವ ನೀರನ್ನು ಯಾವ ಯೋಜನೆಗಳಿಗೆ ಹಂಚಲಾಗಿದೆಯೋ ಅದಕ್ಕೆ ಮಾತ್ರ ಬಳಸಿಕೊಳ್ಳಬೇಕು, ಈ ನ್ಯಾಯಾಲಯದ ತೀರ್ಪನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದೂ ಸುಪ್ರೀಂ ತನ್ನ ತೀರ್ಪಿನಲ್ಲಿ ತಿಳಿಸಿದೆ.

NO COMMENTS

LEAVE A REPLY