ಚರ್ಚ್, ಮಸೀದಿ ಸರ್ಕಾರದ ವಶಕ್ಕೆ ಪಡೆಯಿರಿ: ಸಿಎಂ’ಗೆ ಸಚಿವ ಹೆಗ್ಡೆ ಸವಾಲು..

ಚರ್ಚ್, ಮಸೀದಿ ಸರ್ಕಾರದ ವಶಕ್ಕೆ ಪಡೆಯಿರಿ: ಸಿಎಂ’ಗೆ ಸಚಿವ ಹೆಗ್ಡೆ ಸವಾಲು..

170
0
SHARE

ನವದೆಹಲಿ(ಫೆ.09.2018) : ಮಠಗಳು ಮತ್ತು ಅವುಗಳ ಸ್ವಾಧೀನದಲ್ಲಿರುವ ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಕಾಯ್ದೆ ಅಡಿ ತರಲು ರಾಜ್ಯ ಸರ್ಕಾರ ಹೊರಟಿದೆ. ಈ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಕ್ಕಂದ ಆಡುತ್ತಿದೆ. ಮಠಗಳನ್ನು ವಶಪಡಿಸಿಕೊಳ್ಳುವಂತೆ ಮುಸ್ಲಿಮರ ಮಸೀದಿ, ಕ್ರೈಸ್ತರ ಚರ್ಚುಗಳನ್ನು ಸ್ವಾಧೀನಪಡಿಸಿಕೊಳ್ಳುವ ಛಾತಿ ಸಿದ್ದರಾಮಯ್ಯ ತೋರಲಿ ಎಂದು ರಾಜ್ಯದ ಬಿಜೆಪಿ ಸಂಸದರು ಸವಾಲೆಸೆದಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ತಮ್ಮ ನಿವಾಸದಲ್ಲಿ ಗುರುವಾರ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌, ಪ್ರತಾಪ್‌ ಸಿಂಹ ಮತ್ತು ಭಗವಂತ ಖೂಬಾ, ಶಾಸಕ ಸತೀಶ್‌ ರೆಡ್ಡಿ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹರಿಹಾಯ್ದರು.

ಹಿಂದೂಗಳಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ನಿರತವಾಗಿದೆ. ಬುಧವಾರ ಮಠ ಮಾನ್ಯಗಳ ಸ್ವಾಧೀನದ ಬಗೆಗಿನ ನೋಟಿಸ್‌ ಬಹಿರಂಗಗೊಂಡ ಬಳಿಕ ಗುರುವಾರ ಅದನ್ನು ಹಿಂತೆಗೆದುಕೊಳ್ಳಲಾಗಿದೆ. ಹೀಗೆ ದಿನಕ್ಕೊಂದು ಆದೇಶ ಹೊರಡಿಸಿ ಬಳಿಕ ಅದನ್ನು ಹಿಂತೆಗೆದುಕೊಳ್ಳುವುದರ ಉದ್ದೇಶವಾದರೂ ಏನು? ಬಹುಸಂಖ್ಯಾತರ ಭಾವನೆಗಳೊಂದಿಗೆ ಚಕ್ಕಂದ ಆಡಿದ್ದಕ್ಕಾಗಿ ಸಿದ್ದರಾಮಯ್ಯ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.

ಎರಡು ತಿಂಗಳಿಗೊಂದು ಹಿಂದೂ ಕಾರ್ಯಕರ್ತನ ಹತ್ಯೆಯಾಗುತ್ತಿದೆ. ಅಲ್ಪಸಂಖ್ಯಾತರ ಮೇಲಿನ ಕೇಸ್‌ಗಳನ್ನು ಹಿಂತೆಗೆದುಕೊಳ್ಳಲು ಮುಂದಾಗಿದ್ದ ಸರ್ಕಾರ ಇದೀಗ ಹಿಂದೂ ಮಠಗಳು, ದೇವಸ್ಥಾನಗಳ ಆಸ್ತಿ ಕಬಳಿಸಲು ಸಿದ್ಧವಾಗಿದೆ. ಸಿದ್ದರಾಮಯ್ಯ ಮುಸ್ಲಿಮರು ಮಸೀದಿ ಮತ್ತು ಕ್ರೈಸ್ತರ ಚರ್ಚುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಏಕೆ ಮುಂದಾಗಿಲ್ಲ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸದೆ ಹಿಂದೂಗಳ ಭಾವನೆಗಳೊಂದಿಗೆ ಆಟ ಆಡಿದ ಸಿದ್ದರಾಮಯ್ಯ, ಶಾದಿ ಭಾಗ್ಯ ಯೋಜನೆ ಜಾರಿಗೊಳಿಸಿ ತಾರತಮ್ಯ ನೀತಿ ಅನುಸರಿಸಿದರು. ಲಿಂಗಾಯತ-ವೀರಶೈವ ಎಂಬ ಭಾವನೆ ಮೂಡಿಸಿ ಹಿಂದೂಗಳನ್ನು ಒಡೆಯಲು ಯತ್ನಿಸಿದರು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

ಮುಸ್ಲಿಮರ ವಕ್ಫ್ ಮಂಡಳಿಯ ಆಸ್ತಿ, ಮಸೀದಿಯನ್ನೂ ಸರ್ಕಾರ ಇದೇ ರೀತಿ ವಶಕ್ಕೆ ಪಡೆಯುತ್ತದೆಯೇ? ಮುಂದಿನ ಚುನಾವಣೆಯಲ್ಲಿ ಹಿಂದೂಗಳ ವೋಟು ಬೇಡ ಎಂದು ಹೇಳುವ ತಾಕತ್ತು ಸಿದ್ದರಾಮಯ್ಯ ಅವರಿಗೆ ಇದೆಯೇ ಎಂದು ನಳಿನ್‌ ಸವಾಲೆಸೆದರು.

ಮಠಗಳು ಮತ್ತು ದೇವಸ್ಥಾನಗಳನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಹೊರಡಿಸಲಾಗಿದ್ದ ಪ್ರಕಟಣೆಯನ್ನು ಗುರುವಾರ ವಾಪಸ್‌ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕತ್ತಿದ್ದರೆ ಅದನ್ನು ಜಾರಿಗೊಳಿಸಲಿ. ಅಲ್ಪಸಂಖ್ಯಾತರಾದ ಜೈನ, ಸಿಖ್‌ ಮತ್ತು ಬೌದ್ಧರ ಪೂಜಾ ತಾಣಗಳ ಮೇಲೆ ಕಣ್ಣು ಹಾಕಿರುವ ಕಾಂಗ್ರೆಸ್‌ ಸರ್ಕಾರ ಮುಸ್ಲಿಂ ಮತ್ತು ಕ್ರೈಸ್ತ ಧಾರ್ಮಿಕ ಸಂಸ್ಥೆಗಳ ಮೇಲೆ ರಿಯಾಯಿತಿ ತೋರಿಸಲಿ ಎಂದು ಸವಾಲು ಹಾಕಿದರು.

 

NO COMMENTS

LEAVE A REPLY