ಪರಿಶಿಷ್ಟ ಜಾತಿಗೆ ಮಡಿವಾಳ ಸಮುದಾಯವನ್ನು ಸೇರಿಸಲು ಪರಿಶೀಲನೆ: ಸಿಎಂ

ಪರಿಶಿಷ್ಟ ಜಾತಿಗೆ ಮಡಿವಾಳ ಸಮುದಾಯವನ್ನು ಸೇರಿಸಲು ಪರಿಶೀಲನೆ: ಸಿಎಂ

135
0
SHARE

ಬೆಂಗಳೂರು(ಫೆ.04.2018): ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಬಹುದಿನಗಳಿಂದ ಬೇಡಿಕೆಯಿದ್ದು, ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ‘ಮಡಿವಾಳ ಮಾಚಿದೇವ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೆ ದೇಶದ 17ರಾಜ್ಯಗಳಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟಿ ಜಾತಿ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ರಾಜ್ಯದಲ್ಲೂ ಎಸ್ಸಿ ಪಟ್ಟಿಗೆ ಸೇರಿಸುವುದು ನ್ಯಾಯೋಚಿತವಾಗಿದೆ. ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಡಿವಾಳರ ಅಭಿವೃದ್ಧಿ ಪ್ರಾಧಿಕಾರಿ ಹಾಗೂ ನಿಗಮ ಸ್ಥಾಪಿಸಬೇಕೆಂದು ರಾಜ್ಯ ಮಡಿವಾಳರ ಸಂಘ ಒತ್ತಾಯ ಮಾಡಿದೆ. ಈ ಬಗ್ಗೆ ರಾಜ್ಯ ಸರಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಲಾಗುವುದು. ಒಟ್ಟಾರೆ ಮಡಿವಾಳ ಸಮುದಾಯ ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಇನ್ನು ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುವುದು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಮಡಿವಾಳ ಸಮುದಾಯದ ಪ್ರತಿನಿಧಿಯನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ತಳ ಸಮುದಾಯಕ್ಕೆ ರಾಜಕೀಯ ಅಧಿಕಾರ ಕೊಡುವ ಮೂಲಕ ಸಮ ಸಮಾಜದ ಕನಸನ್ನು ಸಾಕಾರ ಮಾಡಬೇಕು ಎಂದು ಅವರು ಹೇಳಿದರು.

ನಾಡಿನ ಯುವ ಜನತೆಗೆ ಶರಣರ, ದಾಸರ, ಸಮಾಜ ಸುಧಾರಕರ ಹಾಗೂ ಸ್ವಾತಂತ್ರ ಹೋರಾಟಗಾರರ ತತ್ವಾದರ್ಶಗಳನ್ನು ಪರಿಚಯಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಆದರೆ, ಕೆಲವು ಮತಾಂಧರು ಈ ಜಯಂತಿಗಳ ಆಚರಣೆಯನ್ನು ಧರ್ಮದ ಆಧಾರದಲ್ಲಿ ನೋಡುವ ಮೂಲಕ ಅಪಚಾರ ಎಸಗುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಮಠದ ಬಸವ ಮಾಚಿದೇವ ಸ್ವಾಮೀಜಿ, ಕರಂಜೆ ಮಠದ ಮುಕ್ತಾನಂದ ಸ್ವಾಮೀಜಿ, ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ಧರಾಜು, ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ ಮತ್ತಿತರರಿದ್ದರು.

NO COMMENTS

LEAVE A REPLY