ಪ್ರಜಾಶಕ್ತಿಯ ಪ್ರತೀಕ ಗಣರಾಜ್ಯೋತ್ಸವ..

  340
  0
  SHARE

  ಪ್ರಜಾಶಕ್ತಿಯ ಪ್ರತೀಕ ಗಣರಾಜ್ಯೋತ್ಸವ
  1950 ಜನವರಿ 26 ರಂದು ಸಂವಿಧಾನ ಜಾರಿ ಬಂದ ಹಿನ್ನಲೆಯಲ್ಲಿ ಗಣರಾಜ್ಯೋತ್ಸವ ಎಂದು ಆಚರಿಸುತ್ತಿರುವುದೇನೋ ನಿಜ, ಆದರೆ ಈ ರಾಷ್ಟ್ರೀಯ ಹಬ್ಬದ ಮೂಲ ಉದ್ದೇಶವನ್ನು ಅರಿತುಕೊಂಡು ಆಚರಣೆ ಮಾಡಿದರೆ ಗಣರಾಜ್ಯೋತ್ಸವಕ್ಕೆ ನೈಜ ಗೌರವ ತೋರಿದಂತಾಗುತ್ತದೆ.

  ಗುಲಾಮಗಿರಿಯಿಂದ ಬೇಸತ್ತು ಕೆಚ್ಚೆದೆಯಿಂದ ವಸಹಾತು ಆಡಳಿತ ಇನ್ನು ಮುಂದೆ ನಮ್ಮಿಂದ ಸಹಿಸಲಾಗದು ಎಂದು ಅರಿತುಕೊಂಡ ಸ್ವಾತಂತ್ರ ಹೋರಾಟಗಾರರು ಹಾಗೂ ದೇಶಪ್ರೇಮಿ ಜನತೆ ಅನ್ಯರ ಆಳ್ವಿಕೆ ಇಂದ ಮುಕ್ತಿ ಪಡೆಯಲು ಹಲವಾರು ದಶಕಗಳ ಹೋರಾಟ ನಡೆಸಿ ಸ್ವಾತಂತ್ರ್ಯ ಗಳಿಸಿಕೊಂಡರು. ಭಾರತದ ಪ್ರಜೆಗಳಿಗೆ ಸ್ವತಂತ್ರ ದಕ್ಕಿದ ನಂತರ ತಮ್ಮನ್ನು ತಾವೇ ಆಳಿಕೊಳ್ಳುವ ಸುವರ್ಣಾವಕಾಶ ದೊರೆತ್ತಿದ್ದರೂ, ದೇಶದೆಲ್ಲಡೆ ಭಯದ ವಾತಾವರಣ ಸೃಷ್ಟಿ ಆಗಿರುವ ಹಾಗೂ ಪ್ರಜೆಗಳ ಶಕ್ತಿ ಕುಗ್ಗಿ ದಿನೇ-ದಿನೇ ಮರೆಮಾಚುತ್ತಿರುವ ಬೇಸರದ ಸಂಗತಿಯ ಬಗ್ಗೆ ದೇಶದ ಪ್ರಜೆಗಳಾಗಿ ನಾವೆಲ್ಲರೂ ಆಲೋಚಿಸಬೇಕಾಗಿದೆ.

  ಪ್ರಜಾಪ್ರಭುತ್ವವೆಂದರೆ ಎಲ್ಲರಿಗೂ ತಿಳಿದಿರುವಂತೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಸರ್ಕಾರ. ಅಂದರೆ ಜನರ ಒಳಿತಿಗಾಗಿ ಶ್ರಮಿಸುವ ಚುನಾಯಿತ ಪ್ರತಿನಿಧಿಗಳ ಆಡಳಿತ ಮತ್ತು ಯಾವುದೇ ಯಾವುದೇ ಸಂದರ್ಭದಲ್ಲಿ ಚುನಾಯಿಸಿದ ಮತದಾರರಿಗೆ ತಮ್ಮ ಪ್ರತಿನಿಧಿಗಳನ್ನು ವಿರೋಧಿಸುವ ಅಥವಾ ಜನಪ್ರತಿನಿಧಿಗಳು ಜಾರಿಗೆ ತಂದ ಕಾನೂನುಗಳನ್ನು ತಡೆಹಿಡಿಯುವ ಅಧಿಕಾರವಿರುತ್ತದೆ. ಸರಕಾರ ಜನರ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕೇ ಹೊರತು ಜನರನ್ನು ತಮ್ಮ ಇಷ್ಟಾರ್ಥವಾಗಿ ಬಳಸಿಕೊಳ್ಳುವುದು ಡೆಮಾಕ್ರಸಿಯ ಅಪಹಾಸ್ಯವೇ ಸರಿ. ಗಣರಾಜ್ಯವೆಂದರೆ ಒಂದು ಸಂವಿಧಾನ ಅಥವಾ ಆಳ್ವಿಕೆಗೆ (ಸರ್ಕಾರಕ್ಕೆ) ಒಳಪಟ್ಟಿರುವಂಥದ್ದು. ಆಡಳಿತ ವಂಶಪಾರ್ಯಪರವಾಗಿರದೆ ಯಾವುದೇ ರೀತಿಯ ಪಕ್ಷಪಾತ, ತಾರತಮ್ಯವಿಲ್ಲದೆ ಜನಸಾಮಾನ್ಯನೂ ಆಡಳಿತದ ಚುಕ್ಕಾಣಿಯನ್ನು ಹಿಡಿಯುವಷ್ಟು ಅವಕಾಶವನ್ನು ಗಣರಾಜ್ಯದಲ್ಲಿ ಕಲ್ಪಿಸಿಕೊಡಲಾಗಿದೆ. ಒಬ್ಬನಿಗೆ ಒಂದು ಮತದ ಪದ್ದತಿಯೂ ಜನಶಕ್ತಿಯನ್ನು ಬಿಂಬಿಸುತ್ತದೆ. ಗಣರಾಜ್ಯವೆಂದರೆ ಪ್ರಜಾಪ್ರಭುತ್ವದ ಒಂದು ಬಹುಮುಖ್ಯ ಲಕ್ಷಣ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ. ಚುನಾಯಿತ ಜನಪ್ರತಿನಿಧಿಗಳ ಆಯ್ಕೆ ಮತ್ತವರ ಆಯ್ಕೆಯಿಂದ ಜನರಿಗೆ ಅಗತ್ಯವಿರುವ ಸೇವೆಗಳನ್ನು ಪಡೆದುಕೊಳ್ಳುವುದು ಪ್ರಜೆಗಳ ಮೂಲಭೂತ ಹಕ್ಕಾಗಿದೆ. ಗಣರಾಜ್ಯದಲ್ಲಿ ಎಂದಿಗೂ ಜನರ ಹಿತಾಸಕ್ತಿಯ ರಕ್ಷಣೆಗೆ ಮೊದಲ ಆದ್ಯತೆವಿರುತ್ತದೆಯೇ ಹೊರತು ಖಾಸಗಿ ಹಿತಾಸಕ್ತಿ, ಜಮೀನ್ದಾರಿ ಆಳ್ವಿಕೆಗೆಗಲ್ಲ.

  ದೇಶದ ಆಡಳಿತವನ್ನು ರೂಪಿಸುವ, ಯಾವ ಪಕ್ಷ ಅಥವಾ ಯಾವ ಸರ್ಕಾರ ಅಧಿಕಾರಕ್ಕೆ ಬರಬೇಕೆಂಬುದನ್ನು ನಿರ್ಧರಿಸುವ ಅಂತಿಮ ಅಧಿಕಾರ ಪ್ರಜೆಗಳ ಕೈಯಲ್ಲಿದೆ. ಹಾಗೆಯೇ ಆಡಳಿತ ವ್ಯವಸ್ಥಿತವಾಗಿ ಉತ್ತಮಾವಾಗಿದ್ದರೆ ಬೆಂಬಲಿಸುವ ಹಾಗೂ ದುರಾಡಳಿತ ಕಂಡುಬಂದರೆ ಅದನ್ನು ಟೀಕಿಸುವ ಹಕ್ಕು ಜನತೆಗೆ ಗಣರಾಜ್ಯದಲ್ಲಿದೆ. ಇಲ್ಲಿನ ವಿಪರ್ಯಾಸವೇನೆಂದರೆ ಸ್ವಿಜರ್ಲ್ಯಾಂಡ್ ದೇಶದಲ್ಲಿರುವ ರೀ-ಕಾಲ್(ವಾಪಸ್ಸು ಕರೆಸಿಕೊಳ್ಳುವುದು)ವ್ಯವಸ್ಥೆ ನಮಗಿಲ್ಲ. ಆ ವ್ಯವಸ್ಥೆಯೊಂದಿದ್ದರೆ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ, ಜನಪರ ಕಾಳಜಿಯನ್ನು ಹೊಯಿಸದೆ ಭ್ರಷ್ಟರಾಗಿರುವ, ಪ್ರಜೆಗಳಿಗೋಸ್ಕರ ನಾವು ಆಡಳಿತ ಮಾಡುತ್ತಿದ್ದೇವೆಂದು ಬೊಬ್ಬೆ ಹೊಡೆಯುತ್ತ ನಿದ್ರಿಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡುವ ನೇರ ಅಧಿಕಾರ ನಮ್ಮ ಪ್ರಜೆಗಳಿಗೆ ಇರುತ್ತಿತ್ತು. ಆದರೂ ಚಿಂತೆಯಿಲ್ಲ ಸಾರ್ವತ್ರಿಕ ಚುಣಾವಣೆಯ ಮೂಲಕ ಜನಪರ ಆಡಳಿತ ನಡೆಸುವ, ದೇಶದ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುವ, ದುರಾಡಳಿತಕ್ಕೆ ಅವಕಾಶ ಕೊಡದಿರುವ, ನವ ಯೋಜನೆಗಳನ್ನು ಹೊಂದಿರುವಂತಹ ಆಕಾಂಕ್ಷಿಗಳನ್ನು ಪ್ರಜೆಗಳು ಆಯ್ಕೆ ಮಾಡಿಕೊಳ್ಳುವ, ಆರಿಸಿದ ಅಧಿಕಾರಿಗಳು ಒಂದು ವೇಳೆ ನೀಡಿದ ಆಶ್ವಾಸನೆಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದರೆ ಅವರನ್ನು ಪ್ರಶ್ನಿಸಿ ಸರಿದಾರಿಗೆ ಬರುವಂತೆ ಎಚ್ಚರಿಸುವಷ್ಟು ಶಕ್ತಿಯನ್ನು ಈ ಗಣರಾಜ್ಯದಲ್ಲಿ ಕಲ್ಪಿಸಲಾಗಿದೆ.

  ಆದರೆ ಸದ್ಯದ ಮತ್ತು ಮುಂದಿನ ಪರಿಸ್ಥಿತಿಗಳನ್ನು ಗಮನಿಸಿದರೆ ಪ್ರಜಾಶಕ್ತಿ ಪದವು ತನ್ನ ನಿಜಾರ್ಥವನ್ನು ಕಳೆದುಕೊಂಡು ಸಂವಿಧಾನದ ಪರಿಭಾಷೆಯನ್ನೇ ಬದಲಿಸಲು ಹೊರಟಿರುವುದು ಭಾರತ ಸಂವಿಧಾನದ ದುರಂತವೇ ಸರಿ. ಕೊನೆಯಲ್ಲಿ ಗಣರಾಜ್ಯದಲ್ಲಿ ಪ್ರಜಾಶಕ್ತಿಯ ನೈಜ ಸ್ವರೂಪವನ್ನು ಸಂಕ್ಷಿಪ್ತವಾಗಿ ತಿಳಿಸುವುದಾದರೆ : ಸರಕಾರದ ಸಂಪೂರ್ಣ ಅಧಿಕಾರ ಜನರ ಹಿಡಿತದಲ್ಲಿರಬೇಕು, ಸೂಕ್ತ ಪ್ರತಿನಿಧಿಗಳಿಗೆ ತಮ್ಮ ಪರವಾಗಿ , ದೇಶದ ಒಳಿತಿಗಾಗಿ ಆಡಳಿತ ನಡೆಸುವ ಪರಮಾಧಿಕಾರ ನೀಡಿರಬೇಕು, ಚುನಾಯಿತ ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ ಬದ್ದರಾಗಿರಬೇಕು. ಈ ದೃಷ್ಡಿಕೋನದಲ್ಲಿ ನೋಡಿದರೆ ದೇಶದ ಜನತೆಗೆ ತಮ್ಮ ಶಕ್ತಿ, ಸಾಮಾಥ್ರ್ಯದ ಬಗ್ಗೆ ಸ್ಪಷ್ಟ ಅರಿವಿಲ್ಲದಿರುವುದು ಕಂಡುಬರುತ್ತದೆ. ಹಾಗಾಗಿ ಭಾರತವು ನಿಜವಾಗಿ ವ್ಯಾಕರಣ ಬದ್ದವಾಗಿ ಗಣರಾಜ್ಯ – ಪ್ರಜಾಪ್ರಭುತ್ವವಾಗಿ ಉಳಿದಿದೆಯೇ? ಎಂಬ ಪ್ರಶ್ನಗೆ ಪ್ರಜೆಗಳೇ ವ್ಯಾಖ್ಯಾನ ನೀಡಬೇಕಾಗಿದೆ !!.

  ಆಖಿಲ್ ಅಹ್ಮದ್.ಎಂ
  ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸ ಗಂಗೋತ್ರಿ ಮೈಸೂರು

  NO COMMENTS

  LEAVE A REPLY