ದಿಲ್ಲಿ ಗಣರಾಜ್ಯೋತ್ಸವ ಆಚರಣೆ: ವಿಐಪಿ ಬಾಕ್ಸ್’ಗೆ ಕೋಲಾರ ಯುವತಿ

ದಿಲ್ಲಿ ಗಣರಾಜ್ಯೋತ್ಸವ ಆಚರಣೆ: ವಿಐಪಿ ಬಾಕ್ಸ್’ಗೆ ಕೋಲಾರ ಯುವತಿ

193
0
SHARE

ಬೆಂಗಳೂರು(ಜ.09.2018):ನವದೆಹಲಿಯಲ್ಲಿ ನಡೆಯಲಿರುವ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕೋಲಾರದ ಪ್ರತಿಭಾವಂತ ಯುವತಿಯೊಬ್ಬರು ಪ್ರಧಾನಮಂತ್ರಿಗಳ ಜೊತೆಗೆ ಬುಲೆಟ್ ಪ್ರೂಫ್ ಬಾಕ್ಸ್‌ನಿಂದ ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸುವ ಅವಕಾಶ ಪಡೆದಿದ್ದಾರೆ.

ಕೋಲಾರದ ಜಯನಗರದ ನಿವಾಸಿಗಳಾದ ಶ್ರೀನಿವಾಸಲು-ಡಿ.ಎನ್. ಲಕ್ಷ್ಮೀ ದಂಪತಿ ಪುತ್ರಿ ಸಿ.ಎಸ್. ಶ್ರೀಲತಾ ಅವರೇ ಈ ಅವಕಾಶ ಪಡೆದವರು. ಶ್ರೀಲತಾ ಅವರಂತೆಯೇ ಸಿಬಿಎಸ್ಸಿ, ಐಸಿಎಸ್ಸಿ ಹಾಗೂ ವಿಶ್ವವಿದ್ಯಾಲಯಗಳಿಂದ ರ್ಯಾಂಕ್ ಪಡೆದಿರುವ ದೇಶಾದ್ಯಂತ 100 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಜ.26ರ ಗಣರಾಜ್ಯೋತ್ಸವದಂದು ಪ್ರಧಾನಿಗಳ ಬಾಕ್ಸ್‌ನಿಂದಲೇ ಪರೇಡ್ ವೀಕ್ಷಿಸಲು ಆಯ್ಕೆ ಮಾಡಿದೆ. ಅವರಲ್ಲಿ ಕೋಲಾರದ ಶ್ರೀಲತಾ ಅವರೂ ಆಯ್ಕೆಯಾಗಿದ್ದಾರೆ.

ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಶ್ರೀಲತಾ ಅವರಿಗೆ ಈಗಾಗಲೇ ಆಹ್ವಾನ ಪತ್ರ ಕಳುಹಿಸಿದೆ. ಜತೆಗೆ ದೆಹಲಿಗೆ ಆಗಮಿಸಲು ರೈಲು, ವಿಮಾನ ಟಿಕೆಟ್ ನೀಡುವುದಾಗಿಯೂ ತಿಳಿಸಿದೆ. ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪದವಿ ಓದಿರುವ ಶ್ರೀಲತಾ ಅವರು ಬೆಂಗಳೂರು ವಿವಿಗೆ ಪ್ರಥಮ ರ್ಯಾಂಕ್ ಪಡೆದು ವಿವಿಯ 50ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿದ್ದರು.

ಬಳಿಕ 2017ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂಎಸ್ಸಿ ಗಣಿತ ಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಶ್ರೀಲತಾ ಅವರಿಗೆ ಬಿಇ, ಮೆಡಿಕಲ್ ಓದುವ ಅವಕಾಶ ಸಿಕ್ಕಿದ್ದರೂ, ಉತ್ತಮ ಉಪನ್ಯಾಸಕಿ ಯಾಗಬೇಕೆಂಬ ಬಯಕೆಯಿಂದ ಗಣಿತ ಶಾಸ್ತ್ರವನ್ನೇ ಆಯ್ದು ಕೊಂಡಿದ್ದಾರೆ.

NO COMMENTS

LEAVE A REPLY