ಶಾಶ್ವತವಾಗಿ ಮೈಸೂರಿನಲ್ಲೇ ಶಾಸ್ತ್ರೀಯ ಭಾಷೆ ಕೇಂದ್ರ ಕಾರ್ಯ ನಿರ್ವಹಿಸುವಿಕೆ

ಶಾಶ್ವತವಾಗಿ ಮೈಸೂರಿನಲ್ಲೇ ಶಾಸ್ತ್ರೀಯ ಭಾಷೆ ಕೇಂದ್ರ ಕಾರ್ಯ ನಿರ್ವಹಿಸುವಿಕೆ

219
0
SHARE

ಮೈಸೂರು(ಜ.7.2018):ಕನ್ನಡ ಶಾಸ್ತ್ರೀಯ ಭಾಷೆ ಅತ್ಯುನ್ನತ ಕೇಂದ್ರದ ಸ್ಥಳಾಂತರ ವಿವಾದಕ್ಕೆ ತೆರೆಬಿದ್ದಿದ್ದು, ಮೈಸೂರಿನಲ್ಲೇ ಉಳಿಸಿಕೊಂಡು ಕನ್ನಡದ ಅಭಿವೃದ್ಧಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ.

ಈ ಕೇಂದ್ರವು ಭಾರತದ ಇತರ ಶಾಸ್ತ್ರೀಯ ಭಾಷಾ ಕೇಂದ್ರಗಳಂತೆ ಸ್ವಾಯತ್ತವಾಗಿರಬೇಕು ಎಂಬ ಬೇಡಿಕೆ ಮೊದಲಿನಿಂದಲೂ ಇತ್ತು. ಇದಕ್ಕೆ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಒಪ್ಪಿಗೆಯನ್ನೂ ನೀಡಿತ್ತು. ಆದರೆ, ಇದನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆದಿತ್ತು. ಎರಡು ಬಣಗಳು ಸ್ಥಳಾಂತರದ ಪರ–ವಿರೋಧ ನಿಲುವು ತಾಳಿದ್ದವು.

ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದರು. ಎರಡೂ ಬಣಗಳನ್ನು ಒಗ್ಗೂಡಿಸಿ ರಾಜಿ ಮಾಡಿಸಿದ್ದಾರೆ. ಕೇಂದ್ರವು ಮೈಸೂರಿನಲ್ಲೇ ಉಳಿಯಲಿ ಇದರಿಂದ ಕನ್ನಡದ ಅಭಿವೃದ್ಧಿಯ ಕೆಲಸಕ್ಕೆ ಸಾಕಾರವಾಗುತ್ತದೆ ಎಂದು ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮಾಹಿತಿ ನೀಡಿದ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಡಾ.ಡಿ.ಜಿ.ರಾವ್‌, ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಕೇಂದ್ರವು ಎಲ್ಲಿರಬೇಕು ಎಂಬ ವರದಿ ನೀಡುವಂತೆ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಸೂಚಿಸಿತ್ತು. ಸಮಿತಿ ಸದಸ್ಯರಾಗಿದ್ದ ‍ಪ್ರೊ.ಎಲ್‌.ಹುನುಮಂತಯ್ಯ ಅವರು ಕೇಂದ್ರವು ಬೆಂಗಳೂರಿಗೆ ಸ್ಥಳಾಂತರವಾಗಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರೊ.ಎನ್‌.ಎಸ್.ತಾರಾನಾಥ್‌ ಅವರು ಮೈಸೂರಿನಲ್ಲೇ ಉಳಿಸುವಂತೆ ಕೋರಿ ಪ್ರತ್ಯೇಕ ವರದಿ ಕೊಟ್ಟಿದ್ದರು ಎಂದರು.

ಕೇಂದ್ರಕ್ಕೆ ಮೈಸೂರು ವಿಶ್ವವಿದ್ಯಾಲಯವು ಜಾಗ ನೀಡಲು ಒಪ್ಪಿದೆ. ಹಾಗಾಗಿ ಶೀಘ್ರದಲ್ಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ತಿಳಿಸಿದರು.

ಪ್ರಸ್ತುತ ಭಾರತೀಯ ಭಾಷಾ ಸಂಸ್ಥಾನದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

NO COMMENTS

LEAVE A REPLY