ಸ್ಮಾರ್ಟ್‌ ಸಿಟಿ: ರಾಜ್ಯ ಆಮೆನಡಿಗೆ

ಸ್ಮಾರ್ಟ್‌ ಸಿಟಿ: ರಾಜ್ಯ ಆಮೆನಡಿಗೆ

196
0
SHARE

ಬೆಂಗಳೂರು(ಡಿ.31.2017): ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಆಯ್ಕೆಯಾದ ರಾಜ್ಯದ 7 ನಗರಗಳಿಗೆ ಬಿಡುಗಡೆ ಮಾಡಿರುವ 1924 ಕೋಟಿ ರೂ. ಅನುದಾನದಲ್ಲಿ, ಇದುವರೆಗೆ ಕೇವಲ 179.29 ಕೋಟಿ ರೂ. (ಶೇ.9.31) ಖರ್ಚಾಗಿದ್ದು, ಯೋಜನೆ ಕಾಮಗಾರಿಗಳ ಅನುಷ್ಠಾನ ನಿಧಾನವಾಗಿದೆ.

ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಶನಿವಾರ ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಇಡೀ ದೇಶದ ಚಿತ್ರಣವೂ ಇದೇ ರೀತಿ ಇದೆ. ಆಯ್ದ 60 ನಗರಗಳಿಗೆ ಬಿಡುಗಡೆ ಮಾಡಲಾಗಿರುವ 9,860 ಕೋಟಿ ರೂ. ಅನುದಾನದ ಪೈಕಿ ಇದುವರೆಗೂ 645 ಕೋಟಿ ರೂ.( ಶೇ. 7) ಮಾತ್ರ ಖರ್ಚಾಗಿದೆ. ಕೇಂದ್ರದ ಹಣ ಪರಿಣಾಮಕಾರಿಯಾಗಿ ಸದ್ಬಳಕೆಯಾಗದೇ ಇರುವುದು ಸಚಿವಾಲಯಕ್ಕೆ ಚಿಂತೆ ಉಂಟು ಮಾಡಿದೆ.

ಈ ಯೋಜನೆ ಜಾರಿಯ ಪ್ರಗತಿ ಕುರಿತು ಇತ್ತೀಚೆಗೆ ನಗರಾಭಿವೃದ್ಧಿ ಖಾತೆ ಸಹಾಯಕ ಸಚಿವ ಹರದೀಪ್‌ ಸಿಂಗ್‌ ಪುರಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪರಾಮರ್ಶೆ ನಡೆಸಲಾಗಿತ್ತು. ಕಾಮಗಾರಿಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಹಿಂದೆ ಬಿದ್ದಿರುವ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ಮೂಲಗಳು ಹೇಳಿವೆ. ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು.

NO COMMENTS

LEAVE A REPLY