ಸಂವಿಧಾನ ಬದಲಿಸುವ ಹೇಳಿಕೆ: ಸಂಸತ್‌ ನಲ್ಲಿ ಪ್ರತಿಭಟನೆ

ಸಂವಿಧಾನ ಬದಲಿಸುವ ಹೇಳಿಕೆ: ಸಂಸತ್‌ ನಲ್ಲಿ ಪ್ರತಿಭಟನೆ

219
0
SHARE

ಹೊಸದಿಲ್ಲಿ(ಡಿ.27.2017): ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್‌ ಹೆಗಡೆ ಅವರು ನೀಡಿದ ‘ಸಂವಿಧಾನ ಬದಲಿಸುವ’ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳು ಸಂಸತ್‌ ಕಲಾಪಕ್ಕೆ ತಡೆಯೊಡ್ಡಿದವು.

ಕಾಂಗ್ರೆಸ್‌ ಸದಸ್ಯರು ಸಭಾಧ್ಯಕ್ಷರ ಮುಂದಿನ ಅಂಗಳಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿದರು. ಇದೇವೇಳೆ, ತೆಲಂಗಾಣಕ್ಕೆ ಪ್ರತ್ಯೇಕ ಹೈಕೋರ್ಟ್‌ ಬೇಕೆಂದು ಆಗ್ರಹಿಸಿ ಟಿಆರ್‌ಎಸ್‌ ಸದಸ್ಯರು ಗದ್ದಲವೆಬ್ಬಿಸಿದರು.

ಕೆಲವು ಸದಸ್ಯರು, ಪಾಕಿಸ್ತಾನದಲ್ಲಿ ಕುಲಭೂಷಣ್‌ ಜಾಧವ್‌ ಕುಟುಂಬದವರನ್ನು ಹೀನಾಯವಾಗಿ ನಡೆಸಿಕೊಂಡ ಬಗ್ಗೆ ಧ್ವನಿಯೆತ್ತಿದರು. ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಪದೇ ಪದೇ ಕೋರಿದರೂ ಸದಸ್ಯರು ಗದ್ದಲ ನಿಲ್ಲಿಸಲಿಲ್ಲ. ಹೀಗಾಗಿ ಕೊನೆಗೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯ ವರೆಗೆ ಮುಂದೂಡಲಾಯಿತು.

ಸದನ ಮತ್ತೆ ಸೇರಿದಾಗ ಶಿವಸೇನೆ ಸದಸ್ಯರು ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು. ಅವರೊಂದಿಗೆ ಕೆಲವು ಬಿಜೆಪಿ ಸದಸ್ಯರೂ ಸೇರಿಕೊಂಡ ‘ಪಾಕಿಸ್ತಾನ್‌ ಮುರ್ದಾಬಾದ್‌’ ಎಂದು ಕೂಗಿದರು.

ಪ್ರಶ್ನಾ ವೇಳೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತ, ಸಚಿವ ಹೆಗಡೆ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ‘ಅಂಬೇಡ್ಕರ್‌ಗೆ ಅವಮಾನ ಮಾಡುವುದನ್ನು ಸಹಿಸಲಾಗದು’ ಎಂದರು.

ಭಾನುವಾರ ಕರ್ನಾಟಕದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಸಚಿವ ಹೆಗಡೆ, ‘ಜನರು ತಮ್ಮ ಧರ್ಮದಿಂದ ಗುರುತಿಸಿಕೊಳ್ಳಬೇಕು. ತಮ್ಮ ತಂದೆ ತಾಯಿಯ ರಕ್ತದ ಪರಿಚಯ ಇಲ್ಲದವರು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಅಂಥವರಿಗೆ ತಮ್ಮ ಅಪ್ಪ-ಅಮ್ಮನ ಪರಿಚಯ ಇರುವುದಿಲ್ಲ’ ಎಂದು ಹೇಳಿದ್ದರು. ಅಲ್ಲದೆ ‘ಸಂವಿಧಾನ ಕಾಲಕಾಲಕ್ಕೆ ಬದಲಾಗಬೇಕು, ಬದಲಾಗಿದೆ ಮತ್ತು ಬದಲಾಗುತ್ತಲೇ ಇರುತ್ತದೆ. ಅದನ್ನು ಬದಲಿಸಲೆಂದೇ ಬಂದವರು ನಾವು’ ಎಂದೂ ಹೇಳಿದ್ದರು.

ಸಂಸತ್‌ನಲ್ಲಿ ಗದ್ದಲ ನಡೆಯುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಹಾಜರಿರಲಿಲ್ಲ. ಅವರು ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

NO COMMENTS

LEAVE A REPLY