ಮೈಸೂರಿನ ಪ್ರಗತಿಪರ ರೈತರಾಗಿ ಚಂದ್ರೆಗೌಡರು

  560
  0
  SHARE

  ಮೈಸೂರಿನ ಪ್ರಗತಿಪರ ರೈತರಾಗಿ ಚಂದ್ರೆಗೌಡರು

  ರೈತ ದೇಶದ ಬೆನ್ನೆಲಬು ಎಂಬ ಮಾರ್ಮಿಕವಾದ ನುಡಿ ಇದೆ. ಅದರಂತೆ ಯಾವುದೇ ರಾಷ್ಟ್ರವು ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕಾದರೆ ಕೃಷಿ ಪ್ರಧಾನವಾದ ಸಾಧನ. ಪ್ರಪಂಚದ ಎಲ್ಲಾ ಸಕಲ ಜೀವಿಗಳಿಗೂ ಕೂಡ ಆಹಾರ ಅವಶ್ಯಕವಾದದು, ಮಾನವರಂತೂ ಬಹುಮುಖ್ಯವಾಗಿ ಆಹಾರವನ್ನು ಅವಲಂಬಿಸಿದ್ದಾರೆ, ಆದರೆ ಯಾರೂ ಕೂಡ ವ್ಯವಸಾಯ ಮಾಡಲೂ ಸಿದ್ದವಿಲ್ಲ. ಅದರಲ್ಲೂ ಜಾಗತೀಕರಣದ ಮಾಯಾಜಾಲಕ್ಕೆ ಒಳಗಾಗುತ್ತಿರುವ ಇಂದಿನ ಜೀವನದ ಗತಿಯಲ್ಲಿ ಕೃಷಿವೆಂಬುದು ಕೈಸುಟ್ಟಿಕೊಳ್ಳುವ ಕರ್ಮಕಾಂಡವಾಗಿದೆ. ಕೃಷಿಕಾಯಕವನ್ನು ಬಿಡಲೂ ಆಗದ, ಕಟ್ಟಿಕೊಳ್ಳಲೂ ಆಗದ ಸಂದಿಗ್ಧ ಸ್ಥಿತಿಯಲ್ಲಿ ರೈತನ ಬದುಕು ಸಾಗುತ್ತಿದೆ. ಇಂದು ಹಳ್ಳಿಗಳಲ್ಲಿ ದುಡಿಯುವ ಯುವಕರೇ ಇಲ್ಲ, ಎಲ್ಲರೂ ನಗರದ ಗಾರ್ಮೆಂಟ್ಸ್ ಗಳಲ್ಲಿ ಸಿಕ್ಕುವ ಮಾಸಿಕ ಐದಾರು ಸಾವಿರ ರೂಪಾಯಿಗಳಿಗೆ ಜೀತಕ್ಕೆ ಸೇರಿದ್ದಾರೆ. ಇಂದು ಹಳ್ಳಿಗಳಲ್ಲಿ ಉಳಿದಿರುವವರು ಮುದುಕರು, ಮಕ್ಕಳು ಹಾಗೂ ಕೈಲಾಗದವರು. ಇಂತಹ ಗಂಭೀರ ಸ್ಥಿತಿಯಲ್ಲಿ ನಗರಕ್ಕೆ ವಲಸೆ ಬಂದರು ಸಹಾ ತಮ್ಮ ಮೂಲ ಕಸುಬಾದ ಕೃಷಿಯನ್ನು ಬಿಡದೆ, ವ್ಯವಸಾಯ ಮಾಡುತ್ತಾ, ಭೂಮಿಪತ್ರರಾಗಿದ್ದಾರೆ ವೈ.ಎ ಚಂದ್ರೆ ಗೌಡರು.


  ಕೃಷಿ ಎಂಬುದು ಕೇವಲ ಹೊಟ್ಟೆಪಾಡಿನ ದಂಧೆಯಲ್ಲ, ಅದೊಂದು ಸಂಸ್ಕೃತಿ ಹಾಗೂ ನಿಸರ್ಗ ಧರ್ಮವನ್ನು ಗೌರವಿಸುವಂತಹ ಕಾಯಕ ಎಂದು ನಂಬಿರುವ ಚಂದ್ರೆಗೌಡರದು ಮೂಲತಃ ರೈತಾಪಿ ಕುಟುಂಬ. ಸಕಲೇಶ್‍ಪುರ ತಾಲ್ಲೊಕಿನ ಯಡಕೆರಿ ಗ್ರಾಮದವರು, ತಂದೆ ಅಪ್ಪಯ್ಯಸ್ವಾಮಿ ಗೌಡರು ಗ್ರಾಮಕ್ಕೆ ಹಿರಿಯ ರೈತರಾಗಿದ್ದರು. ಚಂದ್ರೆಗೌಡರು ಬಾಲ್ಯದಿಂದಲೂ ಸಹಾ ಭೂಮಿತಾಯಿಯೊಂದಿಗೆ ಆಟವಾಡಿಕೊಂಡು ಬೆಳೆದರು. ತಮ್ಮ ದಿನನಿತ್ಯ ಜೀವನವನ್ನು ವ್ಯವಸಾಯದಲ್ಲೆ ತೊಡಗಿಸಿದರು. ಕಾಲಕ್ರಮೇಣ ವಿದ್ಯಾವಂತರಾಗಿ ಇವರು ಸರ್ಕಾರಿ ನೌಕರಿ ಪಡೆದು ಮೈಸೂರಿಗೆ ವಲಸೆ ಬರುತ್ತಾರೆ. ಪ್ರಸ್ತುತ ಮೈಸೂರ್ ಸ್ಯಾಂಡಲ್ ಆಯಿಲ್ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವ್ಯವಸಾಯದಲ್ಲಿ ಅಪಾರ ಒಲವು ಹೊಂದಿರುವ ಇವರು ಕಳೆದ ಐದು ವರ್ಷಗಳ ಹಿಂದೆ ಮೈಸೂರು ತಾಲ್ಲೂಕಿನ ಗುಮಚನಹಳ್ಳಿ ಎಂಬಲ್ಲಿ ಐದು ಎಕರೆ ಬರಡು ಭೂಮಿಯನ್ನು ಕೊಂಡು, ಅದನ್ನು ನೀರಾವರಿ ಭೂಮಿಯನ್ನಾಗಿ ಪರಿವರ್ತಿಸಿ ಕೃಷಿಯಲ್ಲಿ ತೊಡಗಿಸಿದ್ದಾರೆ. ಇಲ್ಲಿ ತೋಟದಮನೆ ಮತ್ತು ನರ್ಸರಿಯನ್ನು ನಿರ್ಮಿಸಿದ್ದಾರೆ. ರಜಾ ದಿನಗಳು ಮತ್ತು ಬಿಡುವಿನ ಸಮಯದಲ್ಲಿ ತಮ್ಮ ತೋಟಕ್ಕೆ ತೆರಳಿ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಧರ್ಮಪತ್ನಿಯಾದ ಉಮಾ ರವರು ಮತ್ತು ಪುತ್ರ ರಾಕೇಶ್ ಗೌಡರು ಕೂಡ ಚಂದ್ರೆಗೌಡರ ಜೊತೆ ಕೈ ಜೋಡಿಸಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ಸಹಕರಿಸುತ್ತಾರೆ.

  ತಮ್ಮ ತೋಟದಲ್ಲಿ ಎಲ್ಲಾ ರೀತಿಯ ವಿಧವಾದ ಬಾಳೆ, ಪರಂಗಿ, ಟೊಮೊಟೊ, ಎಲೆಕೋಸು ಮುಂತಾದ ಹಣ್ಣು ಮತ್ತು ತರಕಾರಿಯನ್ನು ಬೆಳೆಯುತ್ತಾರೆ. ಅದಲ್ಲದೆ ರಾಗಿ, ಮೆಕ್ಕೆಜೋಳ ಮುಂತಾದ ಆಹಾರ ಬೆಳೆಯನ್ನು ಬೆಳೆಯುವದರಲ್ಲಿ ನಿಪುಣರು ಎನ್ನಬಹುದು. ಯಾವ ಕಾಲಕ್ಕೆ ಎಂಥಹ ಬೆಳೆಸನ್ನು ಮಾಡಬೇಕು ಎಂದು ಚನ್ನಾಗಿ ಅರಿತಿರುವ ಇವರು, ರಾಸಯನಿಕ ಗೊಬ್ಬರವನ್ನು ವಿರೋಧಿಸಿ, ಸಾವಯುವ ಗೊಬ್ಬರವನ್ನು ವ್ಯವಸಾಯದಲ್ಲಿ ಅತೀವವಾಗಿ ಬಳಸುತ್ತಾರೆ.

  ಹೆಚ್ಚುಕಾಲ ಅಲ್ಲಿನ ಸ್ಥಳಿಯ ರೈತರ ಜೊತೆ ಕಾಲಕಳೆಯುವ ಇವರು, ಹೊಸಬೆಳೆಗಳು, ಸಾಗುವಳಿ, ಮಾರುಕಟ್ಟೆ ಬಗ್ಗೆಯೇ ಚರ್ಚಿಸುತ್ತಾರೆ ಹಾಗೂ ಅನೇಕ ರೈತರಿಗೆ ಮಾರ್ಗದರ್ಶನ ಮಾಡುವುದು ಉಂಟು. ಹೀಗೆ ಹಳ್ಳಿಯಲ್ಲಿನ ವ್ಯವಸಾಯ ಮರೆತು ಪಟ್ಟಣದೆಡೆಗೆ ಬಂದಿರುವ ವಲಸಿಗರಿಗೆ ಉತ್ತಮ ಮಾದರಿಯಾಗಿರುವ ಚಂದ್ರೆಗೌಡರು, ಭೂಮಿತಾಯಿ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದು ನುಡಿದು ಸದಾ ಹಸನ್ಮುಖಿಯಾಗಿ ತಮ್ಮ ಜೀವನದ ಪಯಣವನ್ನು ನಡೆಸುತ್ತಿದ್ದಾರೆ.

  NO COMMENTS

  LEAVE A REPLY