ವಿಚಾರವಾದಿಗಳ ಹತ್ಯೆ ಮತ್ತು ಪ್ರಜಾಪ್ರಭುತ್ವ

  346
  0
  SHARE

  ವಿಚಾರವಾದಿಗಳ ಹತ್ಯೆ ಮತ್ತು ಪ್ರಜಾಪ್ರಭುತ್ವ
  ವಿಚಾರ ಮತ್ತು ಜ್ಞಾನವೆಂಬುದು ಯಾರ ಸ್ವತ್ತಲ್ಲ. ಹಾಗೆಯೇ ವೈಚಾರಿಕತೆ ಎಂಬುದು ಯಾರಿಂದಲೂ ಕದಿಯಲಾಗದ ಸಂಪತ್ತು. ಅಂತೆಯೇ ಜಗತ್ತಿನಲ್ಲಿ ವಿಚಾರವಂತಿಕೆಗೆ ಹೆಚ್ಚಿನ ಆದ್ಯತೆ ಹಾಗೂ ಮನ್ನಣೆಯಿದೆ. ಆದರೂ ಒಬ್ಬ ವ್ಯಕ್ತಿಯ ವಿಚಾರ ಅಥವಾ ವೈಚಾರಿಕತೆಯು, ಇನ್ನೊಬ್ಬ ವ್ಯಕ್ತಿಯ ವಿಚಾರಗಳಿಗಿಂತ ಭಿನ್ನವಾಗಿರಬಹುದು. ಅಂತೆಯೆ ಅದನ್ನು ವಿರೋಧಿಸಲುಬಹುದು.

  ಈ ವಿಚಾರಕ್ಕೆ ಕುರಿತಂತೆ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವ ತನ್ನ ಸಂವಿಧಾನದಲ್ಲಿ ಮುಕ್ತವಾಗಿ ಮಾತನಾಡುವ
  ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಪ್ರಸ್ತುತ ಭಾರತದಲ್ಲಿ ಒಂದಡೆ ವಾಕ್ ಸ್ವಾತಂತ್ರ್ಯದ ದುರುಪಯೋಗವಾಗುತ್ತಿದ್ದರೆ. ಮತ್ತೊಂದೆಡೆ ಪ್ರಗತಿಪರ ಚಿಂತನೆಯ ಕುರಿತಾದ ವಿಚಾರವಾದಿಗಳ ವಿಚಾರವನ್ನು ಸಹಿಸಲಾಗದೆ, ವಾಮಾ ಮಾರ್ಗದ ಮೂಲಕ ಹತ್ಯೆಗಯ್ಯುವ ಶಕ್ತಿಗಳು ಸಮಾಜದಲ್ಲಿ ತಲೆ ಎತ್ತಿವೆ.

  ಭಾರತದಲ್ಲಿ ‘ಜಾತಿ ವ್ಯವಸ್ಥೆಯ’ ಜೊತೆಗೆ,ಅಪಾರ ಪ್ರಮಾಣದ ರಾಜಕೀಯ ಪಕ್ಷಗಳು (ಸುಮಾರು 600 ಕ್ಕೂ ಹೆಚ್ಚು)
  ಇದ್ದು, ಪ್ರಸ್ತುತ ಭಾರತದ ಅಭಿವೃದ್ದಿಗಿಂತ, ವಿನಾಶಕ್ಕೆ ಕಾರಣ ಈ ರಾಜಕೀಯ ಪಕ್ಷಗಳೆನಿಸಿವೆ. ತಮ್ಮ ಪಕ್ಷದ ಏಳಿಗೆಗಾಗಿ ಮತ್ತು ರಾಜಕೀಯದ ಲಾಭಕ್ಕಾಗಿ ಓಟ್ ಬ್ಯಾಂಕ್ ರಾಜಕಾರಣವು ಒಂದು ಮುಖವಾದರೆ, ಸಮಾಜದಲ್ಲಿ ಕೋಮುವಾದದ ಮೂಲಕ ಬೀಜ ಬಿತ್ತಲೂ, ಪ್ರಾಣಹಾನಿ ಹಾಗೂ ಆಸ್ತಿ-ಪಾಸ್ತಿ ಹಾನಿಯ ಮೂಲಕ ಸಮಾಜದ ಸ್ವಾಸ್ಥತೆಯನ್ನು ಕದಡುವುದು, ಇದಕ್ಕಾಗಿ ಬಲಹೀನರು, ಅಮಾಯಕರು ಮತ್ತು ಮೌಢ್ಯರನ್ನು ಬಲಿಪಶು ಮಾಡುವ ಕಾರ್ಯ ಪ್ರತ್ಯಕ್ಷವಾಗಿ ಕಾಣುತ್ತಿವೆ.

  ಇವೆ ಮಾತ್ರವಲ್ಲದೆ ಸಾಮಾಜಿಕ ಕಳಕಳಿ, ಪ್ರಗತಿಪರ ನಿಲುವು, ವಿಚಾರವಂತ ವ್ಯಕ್ತಿಗಳನ್ನು, ಸಮಾಜದ ಬಲಪಥಿಯರನ್ನು ಇಲ್ಲವೆ ಸಾಂಪ್ರದಾಯಿಕ ಸಮಾಜದ ಪ್ರಬಲ ವರ್ಗಗಳು ನೇರವಾಗಿ ಕೇಂದ್ರೀಕರಿಸಿ, ಅವರನ್ನು ಹತ್ಯೆ ಮಾಡಿತಿರುವಂತಹ ಈ ಶಕ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲು ಮಾಡುವ ಮೂಲಕ ಎತ್ತಲೋ ಸಮಾಜವನ್ನು ಕೊಂಡುಯ್ಯುತ್ತವೆಂಬ ಭಯ ನಮಗೆ ಕಾಡದೇ ಇರದು. ಹಾಗೆಯೇ ಅಂತಹ ಬಲಾಢ್ಯರ ಕೈಯಲ್ಲಿ ಇಂದು ನಮ್ಮ ಸರ್ಕಾರವಿದೆ ಎಂಬುದು ವಿಷಾದನೀಯ ಸಂಗತಿ.

  ಅಂತೆಯೇ ಕೆಲವೇ ವರ್ಷಗಳ ಅಂತರದಲ್ಲಿ ಪ್ರಸಿದ್ದ ವಿಚಾರವಾದಿಗಳೆನಿಸಿಕೊಂಡ ಎಂ.ಎಂ ಕಲಬುರ್ಗಿ ಹಾಗೂ ಲಂಕೇಶ್ ಪತ್ರಿಕೆಯ ಸಂಪಾದಕಿಯಾದ ಗೌರಿ ಲಂಕೇಶ್ ಅವರ ಹತ್ಯೆಯಾಗಿದೆ. ಈ ಹತ್ಯೆಯು ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಕೊಲೆಯಾಗಿದೆ ಮತ್ತು ಬೆಲೆಯು ಇಲ್ಲದಂತಾಗಿದೆ.
  ಕಲಬುರ್ಗಿಯವರನ್ನು ಹಾಡುಹಗಲೇ ಗುಂಡಿಟ್ಟು ಕೊಂದ ದುಷ್ಕರ್ಮಿಗಳ ಬಂಧನಕ್ಕೆ ಪೋಲಿಸರು, ಸಿಐಡಿ,ಸಿಬಿಐ, ಗಳಿಂದಲೂ ಸಾಧ್ಯವಾಗದೇ ಇರುವುದು ಅಮಾನವೀಯ ಸಂಗತಿ. ಒಂದು ವೇಳೆ ದುಷ್ಕರ್ಮಿಗಳನ್ನು ಪತ್ತೆಹಚ್ಚಿದರೂ ಕೂಡ,ಈ ಪ್ರಕರಣದ ಹಿಂದೆ ರಾಜಕಾರಣಿಗಳು, ಇಲ್ಲವೇ ಉದ್ಯಮಿಗಳು, ಬಲಪಂಥೀಯ ವ್ಯಕ್ತಿಗಳ ಜಾಲವನ್ನು ಪತ್ತೆಹಚ್ಚಿ ಅವರ ಜನಬಲ, ಹಣಬಲ, ಅಧಿಕಾರ ಬಲಗಳಿಂದ ಅವರನ್ನು ಏನೂ ಮಾಡಲೂ ಸಾಧ್ಯವಿಲ್ಲವೆಂಬ ನಿರ್ಧಾರಕ್ಕೂ ಬಂದಿರುವುಂಟು. ಅಲ್ಲದೇ ಪರಿಸ್ಥಿತಿ ತಿಳಿಯಾಯಿತೆಂದು ಆ ಪ್ರಕರಣದ ಕಡೆ ಅಧಿಕಾರಿ ವರ್ಗ ನಿರಾಸಕ್ತಿ ತೋರುವುದುಂಟು.

  ಅಲ್ಲದೇ ಈ ಬಗ್ಗೆ ಸಮಾಜವು ಕೂಡ ನಿರಾಸಕ್ತಿ ತೋರಿದಾಗಲೇ ಘನ ನ್ಯಾಯಾಲಯವು ಪ್ರಕರಣವನ್ನು ವಿಳಂಬ ಮಾಡಿ ಮುಂದುಡಿಕೆ ಮಾಡಲಾಯಿತು. ಇದನ್ನೆ ಅವಕಾಶ ಮಾಡಿಕೊಂಡ ಸಮಾಜದ ಕೆಲ ಪ್ರಬಲ ಶಕ್ತಿಗಳು, ಮತ್ತೊಬ್ಬ ವಿಚಾರವಾದಿಗಳಾದ ಗೌರಿ ಲಂಕೇಶ್ ರವರನ್ನು ಕೇಂದ್ರೀಕರಿಸಿ,
  ಭೀಕರವಾಗಿ ಹತ್ಯೆಗೈಯ್ದರು. ಇದಕ್ಕೆ ಕಾರಣ ಅವರ ಎಡಪಂಥೀಯ ನಿಲುವು, ಪ್ರಗತಿಪರ ಧೋರಣೆ, ಅಲ್ಲದೇ ಸಮಾಜದ ಗಣ್ಯ ವ್ಯಕ್ತಿಗಳ ಸಮಾಜ ವಿರೋಧಿ ಚಟುವಟಿಕೆಯನ್ನು ಮುಕ್ತವಾಗಿ, ಬಹಿರಂಗವಾಗಿ ಟೀಕೆ ಮಾಡುವಂತದ್ದೆ . ಈ ಹತ್ಯೆಗೆ ಪ್ರಮುಖ ಕಾರಣವೆಂದು ಹೇಳಬಹುದು.

  ಇಂತಹ ಹತ್ಯೆಗಳಿಂದಾಗಿ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರವೇ ಬೆಚ್ಚಿಬೀಳುವಂತಾಗಿದ್ದು, ಯಾರು ಕೂಡ ಮುಕ್ತವಾಗಿ ಮಾತನಾಡುವುದು ಅಪರಾಧವೆಂಬತೆ ಬಿಂಬಿಸುತ್ತಿದೆ. ಇಂತಹ ಘಟನೆಗಳಿಂದ ಭಾರತ ಸಂವಿಧಾನ ತನ್ನ ಪ್ರಜೆಗಳಿಗೆ ನೀಡಿರುವ ವಾಕ್ ಸ್ವಾತಂತ್ರ್ಯದ ಹಕ್ಕು ಏಕೆ? ಎಂಬದು ಜನಸಾಮಾನ್ಯರನ್ನು ಕಾಡದೇ ಇರದು…
  -ಶಾಂತರಾಜು
  ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸ ಗಂಗೋತ್ರಿ ಮೈಸೂರು

  NO COMMENTS

  LEAVE A REPLY