ನೋಡಬನ್ನಿ ಕರ್ನಾಟಕದ ಶ್ರೀಶೈಲ ಮುಡುಕುತೊರೆಯ…

  537
  0
  SHARE

  ನೋಡಬನ್ನಿ ಕರ್ನಾಟಕದ ಶ್ರೀಶೈಲ ಮುಡುಕುತೊರೆಯ…

  ಗಿರಿ ವನ ನದಿ ಈ ಮೂರು ಪ್ರಕೃತಿ ಸೂಬಗನ್ನು ಒಳಗೊಂಡಿರುವ ಮುಡುಕುತೊರೆಯಲ್ಲಿನ ಬೆಟ್ಟ, ತಪ್ಪಲಲ್ಲಿನ ಕಾವೇರಿ ಮಾತೆ, ಸುತ್ತಲಿನ ಹಚ್ಚಹಸುರಿನ ನಿಸರ್ಗದ ರಮಣೀಯ ನೋಟ, ಐತಿಹಾಸಿಕ ಹಿನ್ನೆಲೆಯು ಎಂಥವರ ಮನಸ್ಸನ್ನು ಸೂರೆಗೊಳ್ಳುವಂತೆ ಮಾಡುತ್ತದೆ.

  ಮುಡುಕುತೊರೆಯು ಭ್ರಮರಾಂಭ ಸಹಿತ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಯಾಗಿದ್ದು, 12 ವರ್ಷಗಳಿಗೊಮ್ಮೆ ಘಟಿಸುವ ಪಂಚಲಿಂಗ ದರ್ಶನದಲ್ಲೊಂದು. ( ವೈದ್ಯನಾಥೇಶ್ವರ, ಅರ್ಕೆಶ್ವರ, ಮರುಳೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುನ). ವಿಶೇಷವೆಂದರೆ ಪಂಚಲಿಂಗಗಳ ಉತ್ಸವವು ಏಕಕಾಲದಲ್ಲಿ ನಡೆಯುತ್ತವೆ. ಪ್ರತಿ ವರ್ಷವು ಫೆಬ್ರವರಿ ತಿಂಗಳಿನಲ್ಲಿ ಇಲ್ಲಿ ಜಾತ್ರೆ ಜರುಗುತ್ತಿದ್ದು, ಮುಡುಕುತೊರೆಯ ಜಾತ್ರೆಯು ವಿಷೇಶವಾಗಿ ಬರೊಬ್ಬರಿ 17 ದಿನಗಳ ಕಾಲ ನಡೆಯುತ್ತದೆ. ದನಗಳ ಜಾತ್ರೆ, ಶಯನೋತ್ಸವ, ಪಲ್ಲಕ್ಕಿ ಉತ್ಸವ, ಕೈಲಾಸ ವಾಹನೋತ್ಸವ, ಮಂಟಪ ಉತ್ಸವ, ಗಿರಿಪ್ರದಕ್ಷಿಣೆ, ಪರ್ವತ ಪರೀಷೆಗಳು,ಗಿರಿಜಾ ಕಲ್ಯಾಣ, ತೆಪ್ಪೋತ್ಸವದ ನಂತರ ಅಂತಿಮವಾಗಿ ಬಸವನ ಮಾಲೆ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. ಅಪಾರ ಸಂಖ್ಯೆಯ ಭಕ್ತರು ಜಾತ್ರೆಗೆ ಆಗಮಿಸಿ, ಭ್ರಮಾರಂಭ ಸಹಿತ ಮಲ್ಲಿಕಾರ್ಜುನನ ದರ್ಶನ ಪಡೆಯುತ್ತಾರೆ. ಅಂದು ಪ್ರಮುಖ ಆಕರ್ಷಣೆಯಾಗಿ ಒಟ್ಟು 3 ತೇರುಗಳು ಮುಡುಕುತೊರೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುತ್ತವೆ. ಆಂಧ್ರದಲ್ಲಿನ ಶ್ರೀಶೈಲದಲ್ಲಿನ ಮಲ್ಲಿಕಾರ್ಜುನನ ದರ್ಶನದಷ್ಟೇ ಪುಣ್ಯವು ಮುಡುಕುತೊರೆಯಲ್ಲಿನ ಮಲ್ಲಿಕಾರ್ಜುನನ ದರ್ಶನದಿಂದ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

  ಮುಡುಕುತೊರೆ’ ಹೆಸರಿನ ಸ್ವಾರಸ್ಯ:
  ಕಾವೇರಿ ನದಿಯು ತಿರುಮಕೂಡಲು(ತಿ) ನರಸೀಪುರದ ಬಳಿ ತ್ರಿನದಿಗಳ ಸಂಗಮದ ನಂತರ ಪಶ್ಚಿಮದಿಕ್ಕಿನಿಂದ ಉತ್ತರ ದಿಕ್ಕಿನತ್ತ ಹರಿದು, ಪುನಃ ಪೂರ್ವದ ಕಡೆಗೆ ತಿರುಗಿ ದಕ್ಷಿಣಕ್ಕೆ ಹರಿದುಬರುವುದರಿಂದ “ಮುಡುಕುತೊರೆ” ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

  ಮಲ್ಲಿಕಾರ್ಜುನ ಹೆಸರಿನ ಸ್ವಾರಸ್ಯ:
  ಮಹಾಭಾರತದ ಕಾಲದಲ್ಲಿ ಅರ್ಜುನನು ಶಿವನನ್ನು ‘ಮಲ್ಲಿಕಾ’ ಹೂವಿನಿಂದ ಪೂಜೆಸುತ್ತಾನೆ. ಹಾಗಾಗಿ ಶಿವನಿಗೆ ಮಲ್ಲಿಕಾರ್ಜುನ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.

  ಸುಮಾರು 300 ಅಡಿ ಎತ್ತರದಲ್ಲಿ ಇರುವ ಇಲ್ಲಿನ ಸೋಮಗಿರಿ ಬೆಟ್ಟವು ಸುಮಾರು 350 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹೊಂದಿದ್ದು, ಅದರಲ್ಲಿ 101 ಮೆಟ್ಟಿಲು ಏಕಪಥದಿಂದ ಕೂಡಿದೆ. ಮಲ್ಲಿಕಾರ್ಜುನ ದೇವಾಲಯ, ಭ್ರಮಾರಂಭ ದೇವಾಲಯ, ಗಣಪತಿ, ಚಂಡಿಕೇಶ್ವರಿ, ದುರ್ಗಾದೇವಿ, ನವಗ್ರಹಗಳ ಗುಡಿ ಹೀಗೆ ಪ್ರತ್ಯೇಕ ದೇವಾಲಯಗಳಿವೆ,

  ಮುಡುಕುತೊರೆ ಇರುವ ಸ್ಥಳ:

  ಇದು ಮೈಸೂರಿನಿಂದ 56 ಕಿ.ಮೀ ಇದ್ದು, ತಿ.ನರಸೀಪುರದಿಂದ 18 ಕಿ.ಮೀ ಇದೆ. ಬೆಂಗಳೂರಿನಿಂದ 130 ಕಿ.ಮೀ, ಚಾಮರಾಜನಗರದಿಂದ 54 ಕಿ.ಮೀ, ಹಾಗೂ ಕೊಳ್ಳೆಗಾಲದಿಂದ 45 ಕಿ.ಮೀ ಮತ್ತು ತಲಕಾಡಿನಿಂದ ಕೇವಲ 4 ಕಿ.ಮೀ ದೂರವಿದೆ. ಇಲ್ಲಿಗೆ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ವ್ಯವಸ್ಥೆಯಿದೆ. ಮತ್ತು ತಂಗಲು ಯಾತ್ರಿನಿವಾಸದ ವ್ಯವಸ್ಥೆಯಿದೆ.

  ಪ್ರವಾಸವನ್ನು ಕೈಗೊಳ್ಳುವವರಿಗೆ ಇಲ್ಲಿಗೆ ಹತ್ತಿರವಾದಂತೆ ತಲಕಾಡು, ಸೋಮನಾಥಪುರ, ಶಿವನಸಮುದ್ರ, ಮಾಧವಮಂತ್ರಿ ಅಣೆಕಟ್ಟು, ಗಗನಚುಕ್ಕಿ, ಭರಚುಕ್ಕಿಗಳು ಪ್ರವಾಸಿ ತಾಣಗಳು ಅತ್ಯಂತ ಸಮೀಪವಾಗಿವೆ.
  -ಶಾಂತರಾಜು
  ಪತ್ರಿಕೋದ್ಯಮ ವಿದ್ಯಾರ್ಥಿ
  ಮಾನಸ ಗಂಗೋತ್ರಿ ಮೈಸೂರು

  NO COMMENTS

  LEAVE A REPLY