ನನ್ನ ಮನೆ ಮಗ ಸುನೀಲ್,ನಾನೇಕೆ ಸುಪಾರಿ ಕೊಡ್ಲಿ: ರವಿ ಬೆಳಗೆರೆ

ನನ್ನ ಮನೆ ಮಗ ಸುನೀಲ್,ನಾನೇಕೆ ಸುಪಾರಿ ಕೊಡ್ಲಿ: ರವಿ ಬೆಳಗೆರೆ

227
0
SHARE

ಬೆಂಗಳೂರು(ಡಿ,10.2017):ತಮ್ಮ ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ವಾರ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರನ್ನು ಕಸ್ಟಡಿಗೆ ಪಡೆದು ಎರಡು ದಿನಗಳಾಗಿದ್ದರೂ ಕೊಲೆ ಸಂಚಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಿಲ್ಲ.

ಶುಕ್ರವಾರ ಮಧ್ಯಾಹ್ನ 1.30ರಿಂದ ಸತತವಾಗಿ ಶನಿವಾರ ರಾತ್ರಿವರೆಗೆ ವಿಚಾರಣೆ ನಡೆಸಿದರೂ ರವಿ ಬೆಳಗೆರೆ ಹೇಳುತ್ತಿರುವುದು ‘ನಾನು ಯಾರಿಗೂ ಸುಪಾರಿ ಕೊಟ್ಟಿಲ್ಲ’ ಎಂದು ಮಾತ್ರ. ಈ ನಡುವೆ ವಿಚಾರಣೆ ವೇಳೆ ಅವರು ತೀವ್ರ ಒತ್ತಡಕ್ಕೊಳಗಾಗುತ್ತಿದ್ದು, ಶನಿವಾರ ಸಂಜೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರ ವೈದ್ಯಕೀಯ ತಪಾಸಣೆ ಸಹ ನಡೆದಿದೆ.

ಅಲ್ಲದೆ, ರಾಜರಾಜೇಶ್ವರಿ ನಗರದಲ್ಲಿರುವ ರವಿ ಬೆಳಗರೆ ಅವರ ಎರಡನೇ ಪತ್ನಿ ಯಶೋಮತಿಯ ಮನೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿರುವ ತೋಟದ ಮನೆ ಮೇಲೆ ಸಿಸಿಬಿ ದಾಳಿ ನಡೆಸಿ ಕೆಲ ದಾಖಲೆಗಳನ್ನು ಸಂಗ್ರಹಿಸಿದೆ.

ಶನಿವಾರ ಬೆಳಗ್ಗೆ ಬೆಳಗೆರೆ ಅವರ ವಿಚಾರಣೆ ಪ್ರಾರಂಭಿಸಿದ ಸಿಸಿಬಿ ಡಿಸಿಪಿ ಜಿನೇಂದ್ರ ಕಣಗಾವಿ, ನಿಮ್ಮ ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸಂಚು ರೂಪಿಸಿದ್ದೇಕೆ? ಏನದು ನಿಮ್ಮ ದ್ವೇಷಕ್ಕೆ ವೈಯಕ್ತಿಕ ಕಾರಣ? ಭೀಮಾತೀರದ ಸುಪಾರಿ ಕಿಲ್ಲರ್ ಶಶಿಧರ್ ಮುಂಡವಾಡೆ ನಿಮಗೆ ಹೇಗೆ ಪರಿಚಯ? ಆತನಿಗೆ ಎಷ್ಟು ಹಣಕ್ಕೆ ಸುಪಾರಿ ಕೊಟ್ಟಿದ್ದೀರಿ… ಹೀಗೆ ಪ್ರಶ್ನೆಗಳನ್ನು ಕೇಳಿ ಹೇಳಿಕೆ ಪಡೆಯಲು ಮುಂದಾದರು.

ಆದರೆ ಆರೋಪ ನಿರಾಕರಿಸಿದ ಬೆಳಗೆರೆ, ‘ನಾನು ಯಾರ ಹತ್ಯೆಗೂ ಸಂಚು ರೂಪಿಸಿಲ್ಲ’ ಎನ್ನುತ್ತಿದ್ದಾರೆ ಎಂದು ಗೊತ್ತಾಗಿದೆ. ‘ಡಿಸಿಪಿ ಸಾಹೇಬ್ರೇ ನಿಮಗೆ ಗೊತ್ತಿಲ್ಲ. ನಾನು ಬೆಳೆಸಿದ ಹುಡುಗ ಸುನೀಲ್. ನನ್ನ ಮನೆ ಮಗ ರೀ. ನಾನೇಕೆ ಅವನ ಕೊಲೆಗೆ ಸುಪಾರಿ ಕೊಡ್ಲಿ? ಅವನು ತಪ್ಪು ಮಾಡಿದ್ರೆ ಕಪಾಳಕ್ಕೆ ಹೊಡೆದು ಬುದ್ದಿ ಹೇಳುವ ಅಧಿಕಾರವಿದೆ ನನಗೆ. ಅಷ್ಟುಗಾಢಸಂಬಂಧ ನಮ್ಮದು. ಅಂತಹದರಲ್ಲಿ ನಾನೇಕೆ ಅವನ ಕೊಲೆಗೆ ಸುಪಾರಿ ಕೊಡಲಿ’ ಎಂದು ರವಿ ಬೆಳಗೆರೆ ಹೇಳುತ್ತಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಎಸಿಪಿ ಕಚೇರಿಯಲ್ಲೇ ವಾಸ್ತವ್ಯ:
ಸುಪಾರಿ ಕೊಲೆ ಸಂಚು ಪ್ರಕರಣದಲ್ಲಿ ರವಿ ಬೆಳಗೆರೆ ಅವರನ್ನು ನಾಲ್ಕು ದಿನ ತಮ್ಮ ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು, ಎಸಿಪಿ ಸುಬ್ರಹ್ಮಣ್ಯ ಅವರ ಕಚೇರಿಯಲ್ಲೇ ಹಾಸಿಗೆ ಹಾಗೂ ಕುರ್ಚಿ ಹಾಕಿ ಬೆಳಗೆರೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಪ್ರತಿ ಎರಡು ಗಂಟೆಗೊಮ್ಮೆ ವೈದ್ಯರು ಆರೋಗ್ಯ ತಪಾಸಣೆಗೊಳಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

NO COMMENTS

LEAVE A REPLY