ಮೈಸೂರು(ಡಿ,5,2017):ಹುಣಸೂರು ಹನುಮ ಜಯಂತಿ ಗಲಾಟೆ ವಿವಾದಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧನವಾಗಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಬಿಡುಗಡೆ ಮಾಡಿರುವ ಕ್ರಮ ಇದೀಗ ಅತೀವ ಚರ್ಚೆಗೆ ಎಡೆಮಾಡಿದೆ.
ಡಿಸೆಂಬರ್ 3ರಂದು ಹುಣಸೂರಿನಲ್ಲಿ ಹನುಮ ಜಯಂತಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂಸದ ಪ್ರತಾಪ್ ಸಿಂಹರನ್ನು ಬಿಳಿಕೆರೆಯಲ್ಲಿ ಪೊಲೀಸರು ತಡೆ ಹಿಡಿದಿದ್ದರು. ಈ ವೇಳೆ ಪೊಲೀಸರ ವಿರುದ್ದ ಮಾತಿನ ಚಕಮಕಿ ನಡೆಸಿದ ಸಂಸದ ಪ್ರತಾಪ್ ಸಿಂಹ ಬ್ಯಾರಿಕೇಡ್ ಕಿತ್ತು ಹಾಕಿ ತಾನೇ ಡ್ರೈವ್ ಮಾಡಿಕೊಂಡು ಬ್ಯಾರಿಕೇಡ್ ಮೇಲೆ ಕಾರುಹತ್ತಿಸಿ ದರ್ಪ ತೋರಿದ್ದರು.
ಈ ಹಿನ್ನೆಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಂಸದ ಪ್ರತಾಪಸಿಂಹ ಬಂಧನವಾಗಿತ್ತು. ಭಾರತೀಯ ದಂಡ ಸಂಹಿತೆ 353 ಅಡಿ ಪ್ರಕರಣ ದಾಖಲಾಗಿತ್ತು. ಆದರೆ ಠಾಣೆಯ ಜಾಮೀನಿನ ಮೇಲೆ ಠಾಣಾ ವ್ಯಾಪ್ತಿಯಿಂದ ಹೊರಗೆ ಪ್ರತಾಪ್ ಸಿಂಹರನ್ನು ಬಿಡುಗಡೆ ಮಾಡಲಾಗಿತ್ತು.ಇದೀಗ ಬಿಡುಗಡೆ ಮಾಡಿರುವ ಕ್ರಮ ಭಾರಿ ಚರ್ಚೆಗೆ ಕಾರಣವಾಗಿದೆ
ಕಾನೂನು ಪ್ರಕಾರ ಇದು ಜಾಮೀನು ರಹಿತ ಆರೋಪವಾಗಿದ್ದು, ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ಆದರೆ ಕೆಲವು ವೇಳೆ ವಿವೇಚನೆ ಬಳಿಸಿ ಠಾಣಾ ಜಾಮೀನು ನೀಡಬಹುದು. ಜತೆಗೆ ಘಟನೆ ನಡೆದ ವ್ಯಾಪ್ತಿಯ ಠಾಣೆಗೆ ಮಾತ್ರ ಜಾಮೀನು ನೀಡುವ ಅವಕಾಶವಿದೆ. ಈ ನಡುವೆ ಪ್ರತಾಪಸಿಂಹರನ್ನ ಬಂಧಿಸಿದ್ದು ಹುಣಸೂರಲ್ಲಿ. ಆದರೆ ಬಿಡುಗಡೆ ಆಗಿರುವುದು ಟಿ.ನರಸೀಪುರದಲ್ಲಿ.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ವಿರುದ್ಧವೂ ಇದೇ ಪ್ರಕರಣ ದಾಖಲಾಗಿತ್ತು. ಆ ಸಂದರ್ಭ ಅವರಿಗೆ ತಿಂಗಳ ಬಳಿಕ ಜಾಮೀನು ನೀಡಲಾಗಿತ್ತು. ಮರೀಗೌಡರ ಬಂಧನದ ಬಳಿಕ ಜಾಮೀನು ನೀಡಲಾಗಿತ್ತು
ಆದರೆ, ಈ ಪ್ರಕರಣದಲ್ಲಿ ಆ ರೀತಿ ಯಾಕಿಲ್ಲ ಎಂಬ ಪ್ರಶ್ನೆ ಮೂಡಿದೆ.