ಕನ್ನಡಿಗರ ಹೆಮ್ಮೆಯ ಕನ್ನಡ ಜಾತ್ರೆಗೆ ಇಂದು ಚಾಲನೆ

ಕನ್ನಡಿಗರ ಹೆಮ್ಮೆಯ ಕನ್ನಡ ಜಾತ್ರೆಗೆ ಇಂದು ಚಾಲನೆ

179
0
SHARE

ಮೈಸೂರು(ನ.24.2017):ಸದಾ ಕಾಲ ಪ್ರವಾಸಿಗರ ನೆಚ್ಚಿನ ಗೂಡಾಗಿರುವ ಅರಮನೆಗಳ ನಗರಿಯಲ್ಲಿ ಈಗ ಕನ್ನಡದ್ದೇ ಧ್ಯಾನ. ಕನ್ನಡಿಗರ ಸ್ವಾಭಿಮಾನ, ಹೆಮ್ಮೆ, ಸಡಗರ, ನವೋಲ್ಲಾಸ, ಶ್ರದ್ಧೆ, ಭಕ್ತಿಯ ನುಡಿಜಾತ್ರೆಗೆ ಮಲ್ಲಿಗೆ ನಗರಿ ಸಿಂಗಾರಗೊಂಡಿದೆ.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನುಡಿ ಬರೆಯಲಿದ್ದಾರೆ. ಇತ್ತ ಕನ್ನಡದ ಮನಸ್ಸುಗಳ ಚಿತ್ತವೆಲ್ಲಾ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರ ಮಾತುಗಳತ್ತ ನೆಟ್ಟಿದೆ. ಸಾಂಸ್ಕೃತಿಕ ನಗರಿಯಲ್ಲಿ 26 ವರ್ಷಗಳ ಬಳಿಕ ಸಮ್ಮೇಳನ ನಡೆಯುತ್ತಿದ್ದು, ಕನ್ನಡಧ್ವಜಗಳು ಅತಿಥಿಗಳನ್ನು ಕನ್ನಡ ಸಾಹುತ್ಯವನ್ನ ಉಣಬಡಿಸಲು ಕೈ ಬೀಸಿ ಕರೆಯುತ್ತಿವೆ. ಜ್ಞಾನಪೀಠ ಪುರಸ್ಕೃತರ ಕಟೌಟ್‌ಗಳು ಆತ್ಮೀಯ ಸ್ವಾಗತ ಕೋರುತ್ತಿವೆ. ಪ್ರಮುಖ ವೃತ್ತಗಳಲ್ಲಿ ‘ಹಚ್ಚೇವು ಕನ್ನಡದ ದೀಪ’ ಗೀತೆಯ ಸಾಲುಗಳು ಪ್ರತಿಧ್ವನಿಸುತ್ತಿವೆ.

ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಇನ್ನು ಮೂರು ದಿನ ಕನ್ನಡದ ಹಣತೆ ಬೆಳಗಲಿದೆ. ನಾಡು, ನುಡಿ, ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಪಸರಿಸುವ ಪ್ರಯತ್ನ ನಡೆಯಲಿದೆ.

ಮೆರವಣಿಗೆ ಮೆರುಗು: ಮಲ್ಲಿಗೆಯಿಂದ ಅಲಂಕೃತಗೊಂಡ ತೆರಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 30 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಸಾರೋಟಿನಲ್ಲಿ ಸಾಗಲಿದ್ದಾರೆ. ಮೆರವಣಿಗೆ ಬೆಳಿಗ್ಗೆ 9 ಗಂಟೆಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಆರಂಭವಾಗಲಿದ್ದು, ಸುಮಾರು 5,000 ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗವಹಿಸಲಿದ್ದಾರೆ. 600 ಕಲಾವಿದರು ಕಲಾವೈಭವ ಕಟ್ಟಿಕೊಡಲಿದ್ದಾರೆ. 8 ಸ್ತಬ್ಧಚಿತ್ರಗಳು ಹಾಗೂ ಎತ್ತಿನ ಗಾಡಿಗಳು ಇರಲಿವೆ.

83ನೇ ಸಮ್ಮೇಳನ ಇದಾಗಿರುವುದರಿಂದ ಉದ್ಘಾಟನಾ ಸಮಾರಂಭದಲ್ಲಿ 83 ಕಲಾವಿದರು ನಾಡಗೀತೆಗೆ ದನಿಯಾಗಲಿದ್ದಾರೆ. ಮೂರು ದಿನ ಒಟ್ಟು 22 ಗೋಷ್ಠಿಗಳು ನಡೆಯಲಿದ್ದು, ಹಿಂದಿನ ಸಮ್ಮೇಳನಗಳಿಗೆ ಹೋಲಿಸಿದರೆ ಇದೇ ಅಧಿಕ.

ರಾಜ್ಯದ ವಿವಿಧ ಭಾಗಗಳ ಸಾಹಿತಿಗಳು, ಕವಿಗಳು, ಚಿಂತಕರು ಮತ್ತು ವಿಮರ್ಶಕರು ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ.
ಸಮ್ಮೇಳನದಲ್ಲಿ ಅಕ್ಷರ ಮೆರವಣಿಗೆ ಮಾತ್ರವಲ್ಲದೆ, ನಿತ್ಯ ಮೂರು ಹೊತ್ತು ತರಹೇವಾರಿ ಖಾದ್ಯಗಳೂ ಲಭ್ಯ.
ಸ್ಥಳೀಯ ಖಾದ್ಯಗಳಾದ ಮೇಲುಕೋಟೆ ಪುಳಿಯೋಗರೆ, ಕಡಲೆಹುಳಿ, ಸಿಹಿ, ಖಾರಾ ಪೊಂಗಲ್‌, ಹುಚ್ಚೆಳ್‌ ಚಟ್ನಿ, ಕಜ್ಜಾಯ, ಮೈಸೂರು ಪಾಕ್‌, ನಂಜನಗೂಡಿನ ರಸಬಾಳೆ ಹಣ್ಣಿಗೆ ಮಹತ್ವ ನೀಡಲಾಗುತ್ತಿದೆ.

ಅಲ್ಲದೆ, ಮೆಂತ್ಯ ಸೊಪ್ಪಿನ ಬಾತ್‌, ವಾಂಗೀಬಾತ್‌, ಬಿಸಿಬೇಳೆ ಬಾತ್‌ ಸೇರಿದಂತೆ ವಿವಿಧ ರೀತಿಯ ಬಾತ್‌, ಅಕ್ಕಿರೊಟ್ಟಿ, ಅಕ್ಕಿ ಪಾಯಸ, ಹೋಳಿಗೆ ತುಪ್ಪ, ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ತರಕಾರಿ ಬಿರಿಯಾನಿ ಬಡಿಸಲಾಗುತ್ತದೆ.

ಸಮ್ಮೇಳನ ಪ್ರಯುಕ್ತ ನಗರದ ರಸ್ತೆಗಳು, ವೃತ್ತಗಳು ಹಾಗೂ ಪಾರಂಪರಿಕ ಕಟ್ಟಡಗಳು ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿವೆ.ಸಮ್ಮೇಳನದ ಮೆರವಣಿಗೆ ಸಾಗಲಿರುವ ಹಾದಿಯುದ್ದಕ್ಕೂ ಎಲ್‌ಇಡಿ ಬಲ್ಬುಗಳನ್ನು ಅಳವಡಿಸಲಾಗಿದೆ. ನ. 27ರ ವರೆಗೆ ನಿತ್ಯ ಸಂಜೆ ವೇಳೆ ಈ ದೀಪಗಳು ಬೆಳಗಲಿದ್ದು,ಅಕ್ಷರ ಜಾತ್ರೆಗೆ ಮೆರುಗು ತುಂಬುತ್ತಿವೆ. ಹೀಗಾಗಿ, ನಗರದಲ್ಲಿ ನಾಡಹಬ್ಬ ದಸರಾ ವೈಭವದ ವಾತಾವರಣ ಮರುಕಳಿಸಿದೆ.

ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ವಸತಿ ಹಾಗೂ ಊಟದ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ವೇದಿಕೆಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ.

NO COMMENTS

LEAVE A REPLY